On 23 Mar 2017 8:02 pm, "Sameera samee" <mehak.sa...@gmail.com> wrote:

> ಕನ್ನಡ ಸಾಹಿತ್ಯ ಲೋಕದ ಪ್ರಥಮ ರಾಷ್ಟ್ರಕವಿ ಎಂ.ಗೋವಿಂದ ಪೈ ಅವರ ಜನುಮ ದಿನ ಇಂದು.
> ಅವರ ಬಗ್ಗೆ ಒಂದಿಷ್ಟು ಮಾಹಿತಿ.....
> ರಾಷ್ಟ್ರಕವಿ ಎಂ. ಗೋವಿಂದ ಪೈ
>
> ಕನ್ನಡದ ಪ್ರಥಮ ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು ಜನ್ಮತಾಳಿದ ದಿನ ಮಾರ್ಚ್ 23, 1883.
>  ಅವರು ಜನಿಸಿದ್ದು ಮಂಜೇಶ್ವರದಲ್ಲಿ. ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ
> ನಡೆಸಿದರು.  ಬಿ. ಎ ಪರೀಕ್ಷೆ ಕಟ್ಟಿದ್ದಾಗ ಅವರ ತಂದೆ (ಮಂಗಳೂರಿನ ಸಾಹುಕಾರ ತಿಮ್ಮ ಪೈ)
> ಅವರ  ಮರಣದ ದೆಸೆಯಿಂದಾಗಿ ಪರೀಕ್ಷೆಯ ಮಧ್ಯದಲ್ಲಿಯೇ ಮಂಗಳೂರಿಗೆ ಹಿಂತಿರುಗಬೇಕಾಯಿತು.
>  ಹಿರಿಯ ಮಗನಾಗಿ ಮನೆಯ ಹೊಣೆಯನ್ನು ಹೊರಬೇಕಾಯಿತು.  ಆದ್ದರಿಂದ ಅವರು ಬಿ.ಎ ಪದವಿಯನ್ನು
> ಪಡೆಯಲಾಗಲಿಲ್ಲ.  ಆದರೂ ಅವರು ಇಂಗ್ಲಿಷ್ ವಿಭಾಗದಲ್ಲಿ ಉನ್ನತ ಶ್ರೇಣಿ ಗಳಿಕೆಗಾಗಿ ಚಿನ್ನದ
> ಪದಕ ಗಳಿಸಿದರು.  ಅವರ ವ್ಯಾಸಂಗ ಅರ್ಧಕ್ಕೇ ನಿಂತರೂ ಅವರ ಅಧ್ಯಯನ ಮಾತ್ರ ನಿರಾತಂಕವಾಗಿ
> ಸಾಗಿತು.  ಅವರು ತಮ್ಮ ತಾಯಿಯ ಊರಾದ ಮಂಜೇಶ್ವರದಲ್ಲಿ ಹುಟ್ಟಿದ್ದು ಮಾತ್ರವಲ್ಲದೆ, ಆಕೆಯ
> ಮೂಲಕ ತಮಗೆ ದತ್ತವಾದ ಆಸ್ತಿಯನ್ನೂ ನೋಡಿಕೊಂಡು ಅಲ್ಲಿಯೇ  ನೆಲೆಸಿದ್ದರಿಂದ ಅವರನ್ನು
> ಮಂಜೇಶ್ವರದ ಗೋವಿಂದ ಪೈ ಎಂದು ಕರೆಯುವುದೇ ರೂಢಿಯಾಯಿತು.
>
> ಗೋವಿಂದ ಪೈ ಅವರ ಪತ್ನಿ ಕೃಷ್ಣಾಬಾಯಿ ಅವರು ತಮ್ಮ 45ನೆಯ ವಯಸ್ಸಿನಲ್ಲಿ ಕಣ್ಮುಚ್ಚಿದರು.
>  ಆಕೆಯ ನೆನಪಿನಲ್ಲಿ ‘ಗೊಮ್ಮಟ ಜಿನಸ್ತುತಿ’ ಎಂಬ ಒಂದು ಕವಿತೆಯನ್ನು ರಚಿಸಿ ಆಕೆಗೆ
> ಕಾಣಿಕೆಯಾಗಿತ್ತರು.  ಜೊತೆಗೆ ಸಹಧರ್ಮಿಣಿಯ ನೆನಪಿಗೆ ಬಾಷ್ಪಾಂಜಲಿಯಾಗಿ ತಮ್ಮನ್ನು ಅಗಲಿಸಿದ
> ವಿಧಾತನಿಗೆ ಶ್ರದ್ಧಾಂಜಲಿಯಾಗಿ 87 ಕವಿತೆಗಳನ್ನು ಬರೆದು ‘ನಂದಾದೀಪ’ವೆಂಬ ಕವನ
> ಸಂಕಲನವೊಂದನ್ನು ಅಣಿಗೊಳಿಸಿದ್ದರು.  ಅವರ ಕ್ರಮಬದ್ಧವಾದ ವ್ಯಾಸಂಗ ಅರ್ಧಕ್ಕೇ ನಿಂತಂತೆ,
> ಅವರ ದಾಂಪತ್ಯ ಜೀವನದ ಎಳೆಯೂ ಅರ್ಧದಲ್ಲಿಯೇ ಕಡಿದು ಬಿದ್ದಿತು.  ಈ ಎರಡೂ ಅನಿರೀಕ್ಷಿತಗಳಿಂದ
> ಅವರು ಕುಗ್ಗಿ ಕುಸಿಯದೇ ತಮ್ಮ ದೀರ್ಘಾಯುಷ್ಯವನ್ನು ಧೀಮಂತರಾಗಿಯೇ ನಿರ್ವಹಿಸಿದರು.  ಸುತ್ತ
> ಮುತ್ತಲೂ ಸರ್ವದಾ ಸ್ಮಿತವನ್ನು ಸೂಸುತ್ತಿದ್ದ ಸುಂದರವಾದ ಸೃಷ್ಟಿ ಸೌಂದರ್ಯ, ಕುಟೀರದ
> ಸನಿಹದಲ್ಲಿಯೇ ಇದ್ದ ಕರಾವಳಿಯ ಕಡಲಿನ ಗೆಳೆತನ, ಮನೆಗೆ ಬಂದು ಹೋಗುವ ಬಂಧು ಬಳಗದವರ ಅಭಿಮಾನ,
> ಸಾಹಿತ್ಯ ಬಾಂಧವರ ಸಂವಾದದ ಸವಿ ಮತ್ತು ಸಹೋದರನ ಕುಟುಂಬದ ಸಹವಾಸಗಳಲ್ಲಿ ಅವರ ಜೀವನ
> ಸುಗಮವಾಗಿಯೇ ಸಾಗಿತು.  ತಮ್ಮ ವ್ಯಾಸಂಗದ ಕೋಣೆಯಲ್ಲಿ ಗೋಡೆಗೆ ತೂಗು ಹಾಕಿದ್ದ ಪತ್ನಿಯ
> ಭಾವಚಿತ್ರಕ್ಕೆ ಪ್ರತಿನಿತ್ಯವೂ ಒಂದು ಪುಷ್ಪವನ್ನು ಸಮರ್ಪಿಸದೆ ಅವರ ದಿನದ ಕೆಲಸ
> ಮೊದಲಾಗುತ್ತಿರಲಿಲ್ಲವೆಂದು, ಮಾಸ್ತಿಯವರು ಹೇಳಿರುವ ಮಾತಿನಿಂದ ತಿಳಿದು ಬರುತ್ತದೆ.
>  ಮುಪ್ಪಿನಲ್ಲಿಯೂ ಮುಗ್ಧರಂತೆ ಕಂಡುಬಂದ ವಾಙ್ಮಯ ವಿಶಾರದರನ್ನು ಬನ್ನಂಜೆ ಗೋವಿಂದಾಚಾರ್ಯರು
> ತಮ್ಮ ಕವಿತೆಯಲ್ಲಿ ‘ಬೆಳ್ಳಿ ಮೀಸೆಯ ಮಗು’ ಎಂದು ಕರೆದಿರುವುದು ಇಂದಿಗೂ ಒಂದು ಅಚ್ಚುಕಟ್ಟಾದ
> ನುಡಿಗಟ್ಟಿನಂತಿದೆ.
>
> ಗೋವಿಂದ ಪೈ ಅವರ ಹೆಸರನ್ನು ಕೇಳಿದ ಕೂಡಲೇ ಅವರೊಬ್ಬ ಸುಪ್ರಸಿದ್ಧ ಸಂಶೋಧಕರೆಂದು ಎಲ್ಲರಿಗೂ
> ಕೂಡಲೇ ಸ್ಫುರಿಸುವುದು.  ಗೋವಿಂದ ಪೈ ಅವರ ಸಾಹಿತ್ಯ ವ್ಯವಸಾಯ, ಕಾವ್ಯಸೃಷ್ಟಿಯಿಂದ
> ಅರಳಿರುವುದನ್ನು ಕೂಡಾ ಮರೆಯುವಂತಿಲ್ಲ.  ಹಲವು ನಾಟಕಗಳನ್ನೂ ಅವರು ರಚಿಸಿದ್ದಾರೆ.
>  1900ರಲ್ಲಿ ‘ಸುವಾಸಿನಿ’ ಎಂಬ ಮಂಗಳೂರಿನ ಪತ್ರಿಕೆಗೆ ‘ಸುವಾಸಿನಿ’ ಎಂಬ ಹೆಸರಿನಲ್ಲಿಯೇ
> ಮೂರು ಕಂದ ಪದ್ಯಗಳನ್ನು ಬರೆದು ಕಳುಹಿಸಿದರು.  ಅದು ಆ ಪತ್ರಿಕೆಯಲ್ಲಿ ಪ್ರಕಟವಾದುದಲ್ಲದೆ
> ಅದಕ್ಕಾಗಿ ಇಟ್ಟಿದ್ದ ಬಹುಮಾನವೂ ಬಂದಿತು.  ಆಗ ಪೈ ಅವರು 8ನೆಯ ತರಗತಿಯಲ್ಲಿ
> ಓದುತ್ತಿದ್ದರು.  1911ರ ಸುಮಾರಿನಲ್ಲಿ ಅವರು ರವೀಂದ್ರರ ಎರಡು ಕವನಗಳನ್ನೂ, ಮಹಮ್ಮದ್
> ಇಕ್ಬಾಲ್ ಅವರ ಒಂದು ಪದ್ಯವನ್ನೂ ಅನುವಾದಿಸಿದರು.  ಅಂದಿನ ‘ಸ್ವದೇಶಾಭಿಮಾನಿ’
> ಪತ್ರಿಕೆಯಲ್ಲಿ ಅವುಗಳು ಪ್ರಕಟವಾದಾಗ ದೊಡ್ಡ ಹುಯಿಲೇ ಎದ್ದಿತೆಂದು ತಿಳಿದು ಬರುತ್ತದೆ.
>  ಅನಂತರ ಅವರ ಗಮನ ಇಂಗ್ಲಿಷ್ ಕವಿತೆಗಳಲ್ಲಿ ಪ್ರಯೋಗವಾಗುತ್ತಿದ್ದ ಅಂತ್ಯಾಕ್ಷರ ಪ್ರಾಸಕ್ಕೆ
> ಹೆಚ್ಚಾಗಿ ಮನವೊಲಿದಂತೆ ಕಾಣುತ್ತದೆ.  ಆಧುನಿಕ ಕನ್ನಡ ಕವಿತೆಗಳು ಬಳಕೆಗೆ ಬಂದಂತೆಲ್ಲಾ ಪೈ
> ಅವರ ಕಾವ್ಯ ಸಾಮ್ರಾಜ್ಯ ವಿಸ್ತರಿಸಲಾರಂಭಿಸಿತು.  ಅವರ ಮೊದಲ ಕವನ ಸಂಕಲನವಾದ
> ‘ಗಿಳಿವಿಂಡು’ವನ್ನು ಅವರ ಗುರುಗಳಾದ ಪಂಜೆ ಮಂಗೇಶರಾಯರು ‘ಬಾಲ ಸಾಹಿತ್ಯ ಮಂಡಲ’ದ ಮೂಲಕ
> ಬೆಳಕಿಗೆ ತಂದರು.
>
> ಅವರ ಎರಡನೆಯ ಕವನ ಸಂಕಲನವಾದ  ‘ನಂದಾದೀಪ’ದ ಸಂಕಲನದ ರೂಪುರೇಷೆಗಳನ್ನೆಲ್ಲಾ
> ಅಣಿಗೊಳಿಸಿದ್ದರು.  ಆದರೆ ಈ ಅಪೂರ್ವ ಸಂಕಲನ ಅವರ ಜೀವಿತಾವಧಿಯಲ್ಲಿ ಪ್ರಕಟವಾಗಲಿಲ್ಲ.
>  ಪ್ರಕಾಶಕರು ಎಚ್ಚರಿಕೆ ವಹಿಸಿ ಪೈ ಅವರ ಸೂಚನೆಗಳನ್ನು ಚಾಚೂ ತಪ್ಪದೆ ಇದನ್ನು ಬೆಳಕಿಗೆ
> ತಂದರು.   ಮುಂದೆ ಅಲ್ಲಿ ಇಲ್ಲಿ ಚೆಲ್ಲಿ ಹೋಗಿದ್ದ ಅವರ ಕವನಗಳನ್ನು ಹುಡುಕಿ ‘ಹೃದಯರಂಗ’
> ಎಂಬ ಮೂರನೆಯ ಕವನ ಸಂಕಲನವನ್ನೂ ಕಾವ್ಯಾಲಯದವರು ಪ್ರಕಟಿಸಿದ್ದಾರೆ.  ಅದೇ ತೆರನಾಗಿ ‘ಇಟಂಕ’,
> ‘ಇಂಗಡಲು’ ಮುಂತಾದ ಕವನ ಸಂಕಲನಗಳು ಕೂಡಾ ಮುಂದೆ ಮುದ್ರಣಗೊಂಡವು. ಅಷ್ಟೇ ಅಲ್ಲದೆ ಗೋವಿಂದ
> ಪೈ ಅವರ ‘ಗೊಲ್ಗೊಥಾ’ ಮತ್ತು ‘ವೈಶಾಖಿ’ ಎಂಬ ಅವರ ಪ್ರಸಿದ್ಧವಾದ ಎರಡು ನೀಳ್ಗವಿತೆಗಳು
> ಮೊದಲು ಬಿಡಿ ಬಿಡಿಯಾಗಿ ಅನಂತರ  ಒಟ್ಟುಗೂಡಿ ಪ್ರಕಟಗೊಂಡಿವೆ.
>
> ಗೋವಿಂದ ಪೈ ಅವರ ಕವನಗಳಲ್ಲಿ ಚಂಪೂ ಕವಿಗಳಲ್ಲಿ ಕಂಡುಬರುವಂತೆ ಪ್ರತಿಭೆ ಮತ್ತು
> ಪಾಂಡಿತ್ಯಗಳೆರಡೂ ಹದವಾಗಿ ಕೂಡಿಕೊಂಡು ಬರುತ್ತವೆ.  ಅವರು ತಾವು ಬರೆಯುವ ಅಪೂರ್ವ
> ಶಬ್ದಗಳಿಗೆ, ಇಲ್ಲ ತಾವೇ ಸೃಷ್ಟಿಸುವ ಪದಗಳಿಗೆ ಅಡಿಟಿಪ್ಪಣಿಯನ್ನು ಕೊಡುವುದನ್ನು ಕಂಡು
> ಕೆಲವರಿಗೆ ಬೆರಗಾಗಬಹುದು.  ಅವರ ಪಾಲಿಗೆ ಈ ಕವನ ಕ್ರಿಯೆ ಒಂದು ಚಪಲವಲ್ಲ.  ಅದು ಒಂದು
> ಅಪೂರ್ವವಾದ ಕಲಾ ಕೌಶಲ, ಕಲ್ಪನೆ ಮತ್ತು ಕಲೆಗಳ ಮಧುರ ಸಮನ್ವಯ.  ಅವರಿಗೆ
> ಕವಿ-ಕಾವ್ಯಗಳಲ್ಲಿರುವ ಶ್ರದ್ಧೆ, ಗೌರವಗಳು ಅಪಾರವಾದುದು.  ಪೈ ಅವರು ‘ಕವಿತಾವತಾರ’ವೆಂಬ
> ಕವನದಲ್ಲಿ ವಾಲ್ಮೀಕಿಯನ್ನು ನೆನೆದು, “ಸುಯ್ಯೊಂದು, ನರುಕಂಬನಿಯೊಂದು, ಬಿಕ್ಕೊಂದು – ಕವಿತೆ
> ಗಡ ಮರುಕಂ” ಎಂದು ಹೇಳಿರುವ ಮಾತು ಔಪಚಾರಿಕವಲ್ಲ.  ಅದು ಅವರ ಅಂತಃಕಾರಣದ ಅನುಭವವೂ ಹೌದು.
>  ಕವಿತೆಯ ಕರ್ಮವನ್ನು ಮರ್ಮವನ್ನು ಚೆನ್ನಾಗಿ ಚಿಂತನೆ ಮಾಡಿರುವ ಅವರು “ಕವಿತೆ ಮತಿಜಲ ನಲಿನ,
> ವ್ಯಸನ ವನಧಿಯ ಪುಲಿನ, ಕವಿತೆ ಗಾನದ ಸುಗ್ಗಿ, ಸೊಬಗ ತನಿಗೂಡಿ, ಕವಿತೆ ನವರಸ ರಂಗವದು,
> ತ್ರಿವೇಣಿಯ ಸಂಗಮಿದೊ ನೆನಸು ಕನಸು ಮನಸ್ಸಿನ ತ್ರಿತಯಮೊಡಗೂಡಿ” ಎಂದು ವರ್ಣಿಸುವ ಅವರು
> ಕವಿತೆಗೆ ಶೋಭಾವಹವಾದ ಪ್ರಾಸ, ಛಂದಸ್ಸು, ಶೈಲಿ, ಅರ್ಥಲಾಲಿತ್ಯಗಳನ್ನು ಪುರಸ್ಕರಿಸುವ ರೀತಿ
> ವಿಶಿಷ್ಟವಾದದ್ದು.
>
> ಗೋವಿಂದ ಪೈ ಅವರ ದೇಶಭಕ್ತಿ ತಮ್ಮ ತವರುನಾಡಾದ ತುಳುನಾಡಿನಿಂದ ಕುಡಿಯೊಡೆದು, ಕನ್ನಡನಾಡಿನ
> ಸುತ್ತಲೂ ಬಳ್ಳಿವರಿದು ಕಡೆಗೆ ಭಾರತಾಂಬೆಯ ಮುಡಿಯಲ್ಲಿ ಹೂವಾಗಿ ಅರಳಿ ಪರಿಣಮಿಸುತ್ತದೆ.
> “ಜಯ ಜಯ ತುಳುವ ತಾಯೆ ಮಣಿವೆ, ತಂದೆ ತಾಯಂದಿರ ತಾಯೆ, ಭುವನದಿ ತ್ರಿದಿವಚ್ಛಾಯೆ” ಎಂಬುದು
> ಅವರ ತುಳುನಾಡಿನ ಕುರಿತ ಮೊದಲಸಾಲುಗಳು.  “ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ,
> ಹರಸು ತಾಯೆ, ಸುತರ ಕಾಯೆ. ನಮ್ಮ ಜನ್ಮದಾತೆಯೆ” ಎಂದು ಅಂದು ಅವರು ಕೊರಳೆತ್ತಿ ಹಾಡಿದ ಹಾಡು
> ಎಂದೆಂದಿಗೂ ತನುಮನಗಳಲ್ಲಿ ಮಾರ್ದನಿಸುತ್ತಿರುವುದು.  “ತನು ಕನ್ನಡ, ಮನ ಕನ್ನಡ, ಧನ
> ಕನ್ನಡವೆಮ್ಮೆವು” ಎಂಬ ಮಾತುಗಳು, ಅವರ ಬಾಯಿಂದ ಹೊರಹೊಮ್ಮಿದ ಮಂತ್ರಗಳೇ ಸರಿ!  ಮುಂದೆ
> “ಭಾರತದಲಿ ಸರ್ವಧರ್ಮಮೊಂದಲಿ ಸದನಂ, ಮಾಣಿಸಲೀಕೆಯ ಸ್ವಸ್ತಿಧ್ವಜಮಧರ್ಮದೊಳಕದನಂ” ಎಂದು
> ಶುಭವನ್ನು ಕೋರುವರು.  ಕಡೆಗೆ ‘ಭಾರತಾಂಬೆಯ ಮಹಿಮೆಯನ್ನು’ ಮತ್ತೆ ಮತ್ತೆ ಮೆಚ್ಚಿಕೊಂಡು
> ‘ಭಾರತವನಳಿಯುತ್ತ ನನಗೆ ಜೀವನವೆತ್ತ?  ಭಾರತವೇ ನನ್ನುಸಿರು, ನನ್ನೊಗೆದ ‘ಬಸಿರು’ ಎಂದು
> ತಮ್ಮ ಭಕ್ತಿಯ ಸುಮಮಾಲೆಯನ್ನು ಆಕೆಯ ಮುಡಿಗೆ ತೊಡಿಸಿ ‘ಭಾರತ ಯಶೋಗಾನವೆನ್ನೆದೆಯ ತಾನ’
> “ಭಾರತಾಂಬೆಯ ಭಕ್ತಿ ನನಗಾತ್ಮಶಕ್ತಿ” ಎಂದು ಹಿಗ್ಗುವರು.
>
> ಸ್ವಾತಂತ್ರ್ಯದ ನಂತರದಲ್ಲಿ ಸ್ವಾತಂತ್ರ್ಯದಾತನನ್ನು ನೆನೆದು “ಏನು ತೋರಿಸಿದೆಮಗೆ?
> ಮೇಣೇಮನಿತ್ತೆ: ಕಳಕೊಂಡ ಬಿಡುಗಡೆಯನೆಮಗಿತ್ತೆ ತಂದೆ!  ಆದರೀಗಣ ಕಥೆಯ ಬಲ್ಲೆಯಾ ಮತ್ತೆ?
>  ರಾಹುವನು ತೊಲಗಿಸಿದೆ, ಕೇತುವನು ತಂದೆ” ಎಂದು ಮರುಗುತ್ತಾರೆ.  ಗಾಂಧೀಜಿಯನ್ನು ಸ್ಮರಿಸಿ
> “ಇನ್ನಿನಿಸು ನೀ ಮಹಾತ್ಮ ಬದುಕಬೇಕಿತ್ತು!” ಎಂದು ಯಾತನೆ ಪಡುತ್ತಾರೆ.   ಸ್ವತಂತ್ರ ಭಾರತದ
> ಅತಂತ್ರವನ್ನು ಕಂಡು ವರ್ಷವರ್ಷವೂ ಬರೆದಿರುವ ಚತುರ್ದಶಪದಿಗಳನ್ನು ನೋಡಿದರೆ, ಕವಿಯ ಕಂಬನಿಯ
> ಕುಯ್ಲನ್ನು ಕಾಣಬಹುದು.  ಗೋವಿಂದ ಪೈ ಅವರ ಈ ದೇಶ ಪ್ರೇಮ ಸ್ವದೇಶಕ್ಕೆ ಮಾತ್ರ ಸೀಮಿತವಾಗದೆ,
> ದೂರದ ತುರ್ಕಿಯನ್ನು ಕಬಳಿಸಲು ಇಟಲಿಯು ಮಾಡಿದ ಸನ್ನಾಹವನ್ನು ಖಂಡಿಸುವವರೆಗೂ
> ವ್ಯಾಪಿಸಿರುವುದು.
>
> ಗೋವಿಂದಪೈ ಅವರ ಅಧ್ಯಾತ್ಮಿಕ ದೃಷ್ಟಿ ಹೇಗೆ ಸರ್ವಜನಾದರಣೀಯವಾಗಿದೆ ಎನ್ನುವುದನ್ನು ಅವರ
> ಕೆಲವು ಕವನಗಳಿಂದ ಗ್ರಹಿಸಬಹುದು.  ಪಂಡರಾಪುರದ ವಿಠೋಬನನ್ನು ಮೊದಲ್ಗೊಂಡು, ಜೆರುಸಲೇಮಿನ
> ಯೇಸು ಕ್ರಿಸ್ತನ ವರೆಗೆ ಅವರ ಆಧ್ಯಾತ್ಮಿಕ ಧಾರೆ ಪ್ರವಹಿಸಿದೆ.  ಅವತಾರ ಪುರುಷರಾದ
> ಶ್ರೀಕೃಷ್ಣ ಮತ್ತು ಬುದ್ಧರಲ್ಲಿ ಅವರಿಗೆ ಸಮಾನ ಗೌರವ ಭಾವನೆ.
>
> ಎಲ್ಲಿಯ ಕೃಷ್ಣ – ಎಲ್ಲಿಯ ಕ್ರಿಸ್ತ?  ಆದರೆ ಗೋವಿಂದ ಪೈ ಅವರ ಆದ್ಯಾತ್ಮಿಕ ಪ್ರಜ್ಞೆಗೆ ಆ
> ಇಬ್ಬರೂ ಒಂದೇ ಶಕ್ತಿಯ ಎರಡು ಅವತಾರಗಳೆಂಬ ಪೂಜ್ಯಭಾವನೆ!  ಸಂಪ್ರದಾಯಬದ್ಧವಾದ ಧಾರ್ಮಿಕ
> ಪ್ರಪಂಚದಲ್ಲಿ  ಇದಕ್ಕಿಂತಲೂ ಕ್ರಾಂತಿಕಾರಕವಾದ ತರ್ಕವನ್ನು  ಹೂಡಲು ಸಾಧ್ಯವೇ?  ಪೈ ಅವರ
> ‘ಯೇಸುಕೃಷ್ಣ’ ಎಂಬ ಕವಿತೆಯಲ್ಲಿ ಈ ಅಸದೃಶ ಸಾಮ್ಯವನ್ನು ಎತ್ತಿ ತೋರಿಸಿದ್ದಾರೆ.  ಕೃಷ್ಣನು
> ಸೆರೆಮನೆಯಲ್ಲಿ ಹುಟ್ಟಿದರೆ, ಯೇಸುವು ದನದ ಕೊಟ್ಟಿಗೆಯಲ್ಲಿ ಹುಟ್ಟಿದವನು.  ಒಬ್ಬ ಕೊಳಲೂದಿ
> ದನಗಾಹಿ ಎನಿಸಿದರೆ, ಇನ್ನೊಬ್ಬ ಬಡಗಿಯ ಕೆಲಸವನ್ನು ಅವಲಂಬಿಸಿದವನು.  ಒಬ್ಬ ರಾಧೆಯ
> ಪ್ರೇಮಪಾಶದಲ್ಲಿ ಬಂಧಿತನಾದರೆ, ಇನ್ನೊಬ್ಬ ಮಗ್ದಲದ ಮರಿಯಳ ಅನುರಾಗಕ್ಕೆ ಪಾತ್ರನಾಗುತ್ತಾನೆ.
>  ಒಬ್ಬ ಕೌರವನಿಂದ ಬಂಧಿತನಾದರೆ, ಇನ್ನೊಬ್ಬನು ತನ್ನವರ ಮೂಲಕವೇ ತಲೆಗೆ ಮುಳ್ಳಿನ
> ಕಿರೀಟವನ್ನು ತೊಡಬೇಕಾಗುತ್ತದೆ.  ಈ ತೆರನಾದ ಸಾದೃಶ್ಯ ಪರಂಪರೆಯನ್ನು ಪಟ್ಟಿ ಮಾಡಿ, ಕಡೆಗೆ
> ಪೈ ಅವರು “ಯದುನಾಥನೆ ಯೂದನಾಥನಲ್ಲವೇ?” ಎಂದು ವಿಸ್ಮಯಚಕಿತರಾಗುವರು.
>
> ಉಡುಪಿಯ ಕೃಷ್ಣನಲ್ಲಿ ಅವರ ಮೊರೆ ವಿಶಿಷ್ಟವಾಗಿದೆ.  ದ್ವಾಪರಯುಗದಲ್ಲಿ ಮಹಾಭಾರತದಲ್ಲಿ
> ಸೂತ್ರಧಾರನಂತಿದ್ದು ಧರ್ಮವನ್ನು ಉದ್ಧರಿಸಿದಂತೆ ಇಂದಿನ ಭಾರತದ ಗೋಳನ್ನು ಪರಿಹರಿಸಬೇಕೆಂದು
> ಆತನಲ್ಲಿ ಕವಿ  ಮೊರೆಯಿಡುವರು.  “ಬಡಗೋಳ ಕೇಳೆಮ್ಮ ಕಡಗೋಲ ಕನ್ನ!  ಸಡಗರಿಸೋ ಬಿಡುಗಡಿಸೆ
> ಭಾರತದ ನಿನ್ನ!” ಎಂಬ ನುಡಿ ಪೈ ಅವರ ಹೃದಯವೈಶಾಲ್ಯಕ್ಕೆ ಸಾಕ್ಷಿಯಂತಿದೆ.  ‘ಶ್ರೀ
> ಗೊಮ್ಮಟಜಿನಸ್ತುತಿ’ಯಲ್ಲಿ ಅವರ ಪಾರಮಾರ್ಥಿಕ ದೃಷ್ಟಿ ಆ ವಿಗ್ರಹದಷ್ಟೇ ಎತ್ತರವೂ ಬಿತ್ತರವೂ
> ಆದುದು.
>
> ತನ್ನ ದುರ್ದೈವದಿಂದ ಮೂರು ಮಕ್ಕಳನ್ನು ಒಟ್ಟಿಗೆ ಕಳೆದುಕೊಂಡ ಹತಭಾಗಿನಿಯೊಬ್ಬಳ ಕುರಿತು
> ಬರೆದ ಮಾತಿನಲ್ಲಿ ‘ಅಂದಿನಿಂದಾಕೆ ನಕ್ಕಿಲ್ಲ, ಅತ್ತಿಲ್ಲ’ ಎಂಬ ಪಂಕ್ತಿ ಪೂರ್ಣಪ್ರಮಾಣದ
> ಪಶ್ಚಾತ್ತಾಪ ಪ್ರತಿಸ್ಪಂದಿಸುತ್ತದೆ.  ‘ಮಾತಂಗಿ’ ಎಂಬ ಕಥನ ಕವನದಲ್ಲಿ ಅಸ್ಪೃಶ್ಯ ಜನರ
> ಕುರಿತ ಅನುಕಂಪೆ, ‘ಭಿಕ್ಷುವೂ ಪಕ್ಷಿಯೂ’ ಎಂಬಲ್ಲಿ ಗೋಚರವಾಗುವ ಭಿಕ್ಷುವಿನ ಸಹನೆ,
> ‘ವಾಸವದತ್ತೆ’ ಎಂಬಲ್ಲಿ ಪರಿತ್ಯಕ್ತ ವೇಶ್ಯೆಯ ಬಗ್ಗೆ ಪ್ರಕಾಶಿತವಾಗುವ ಉಪಗುಪ್ತನ
> ಉದಾರದೃಷ್ಟಿ ಮೊದಲಾದುವು ಕವಿಯ ಮಾನವೀಯತೆಯನ್ನು ಪ್ರತಿಬಿಂಬಿಸುವ ಉತ್ತಮ ಉದಾಹರಣೆಗಳು.
>
> ಗೋವಿಂದ ಪೈ ಅವರು ವಿಭೂತಿ ಮಹತ್ವವನ್ನು ಕಂಡಲ್ಲಿ ಕೈಮುಗಿದು ತಲೆಬಾಗುವ ತಲೆಮಾರಿನವರು.  ಈ
> ಕ್ಷೇತ್ರದಲ್ಲಿ ಅವರಿಗೆ ಕಾಲ ದೇಶಗಳ ಅಂತರವಾಗಲಿ; ಜಾತಿ, ಮತ, ಪಂಥಗಳ ತಾರತಮ್ಯವಾಗಲಿ ಇಲ್ಲ.
> ಅವರ ಈ ಪೂಜ್ಯ ಭಾವನೆ ಯೇಸುವಿನ ಕಡೆಯ ದಿನವನ್ನು ಕುರಿತು ‘ಗೊಲ್ಗೊಥಾ’ ಮತ್ತು ಬುದ್ಧನ ಕಡೆಯ
> ದಿನವನ್ನು ಕುರಿತ ‘ವೈಶಾಖಿ’ ಎಂಬ ನೀಳ್ಗವಿತೆಗಳಲ್ಲಿ ವಿಶ್ವರೂಪವನ್ನೇ ತಾಳಿರುವುದನ್ನು
> ಕಾಣಬಹುದು.  ಈ ಎರಡೂ ಕೃತಿಗಳೂ ಧಾರ್ಮಿಕ ಪುರುಷರನ್ನು ಕುರಿತಾದುದರಿಂದ ವಿಷಯವನ್ನು
> ಪ್ರತಿಪಾದಿಸುವಲ್ಲಿ ಕವಿಯ ಹೊಣೆ ಬಹಳ ದೊಡ್ಡದಾದುದು.  ಆ ಸಲುವಾಗಿಯೇ ಗೋವಿಂದ ಪೈ ಅವರು
> ‘ಗೊಲ್ಗೊಥಾ’ದ ವಸ್ತುವನ್ನು ಸಂಗ್ರಹಿಸುವಲ್ಲಿ ಮೂಲ ಆಕರಗಳನ್ನು ಎಷ್ಟು ನಿಷ್ಠೆಯಿಂದ
> ವ್ಯಾಸಂಗ ಮಾಡಿರುವರೆನ್ನುವುದನ್ನು, ‘’ವೈಶಾಖಿ’ಗೆ ಸಂಬಂಧಿಸಿದ ಪಾಳಿಭಾಷೆಯ ಗ್ರಂಥಗಳನ್ನೇ
> ಅವಲಂಬಿಸಿರುವರೆಂಬುದನ್ನೂ ಅವರು ಕೊಟ್ಟಿರುವ ಟಿಪ್ಪಣಿಗಳಿಂದ ತಿಳಿಯಬಹುದು.  ಅವರು
> ಕೈಕೊಂಡಿರುವ ಕೆಲಸವಾದರೋ ಆಯಾ ಧರ್ಮದ ಪ್ರಚಾರವಲ್ಲ.  ಆಯಾ ಮಹಾಪುರುಷರ ಮರಣದ ಮಹಾತ್ಮೆ
> ಮಾತ್ರ!
>
> ಗೊಲ್ಗೊಥಾದಲ್ಲಿ ಯೇಸುವಿನ ಮೇಲಿನ ಅಂತಃಕರಣವೆಲ್ಲ ತನಗೆ ತಾನೇ ರೂಪುವೆತ್ತು ಕಡೆದು
> ನಿಲ್ಲಿಸಿದ ಜೀವಂತ ಕೃತಿಯೆನ್ನಿಸಿ ಕನ್ನಡದಲ್ಲಿ ಅಮರವಾಗಿದೆ.  ಆ ಬಳಿಕ ಕೆಲವು ವರ್ಷಗಳ
> ತರುವಾಯ ರಚಿಸಿದ ‘ವೈಶಾಖಿ’ ಯಲ್ಲಿ ವೈಶಾಖ ಶುಕ್ಲ ಪೂರ್ಣಿಮೆಯಂದು ರಾಜಕುಮಾರನಾಗಿ ಹುಟ್ಟಿದ
> ಸಿದ್ಧಾರ್ಥನು, ಸರ್ವವನ್ನೂ ತ್ಯಾಗ ಮಾಡಿ ಸಂನ್ಯಾಸವನ್ನು ಕೈಗೊಂಡು, ವೈಶಾಖ ಶುಕ್ಲ
> ಪೂರ್ಣಮಿಯಂದೇ ಜ್ಞಾನೋದಯವನ್ನು ಪಡೆದು ಬುದ್ಧನೆಂಬ ಹೆಸರಿನಿಂದ ಜಗತ್ಪ್ರಸಿದ್ಧನಾಗಿ, ವೈಶಾಖ
> ಶುಕ್ಲ ಪೂರ್ಣಮಿಯಂದೇ ಪರಿನಿರ್ವಾಣವನ್ನು ಪಡೆದುದರಿಂದ ಕವಿಗಳು ಈ ಹೆಸರನ್ನು ಇಟ್ಟಿರುವುದು
> ಅರ್ಥಪೂರ್ಣವಾಗಿದೆ.
>
> ಕವಿ ಮತ್ತು ಸಂಶೋಧಕನ ಪ್ರಜ್ಞೆಗಳೆರಡನ್ನೂ ಒಳಗೊಂಡಿರುವ ಗೋವಿಂದ ಪೈ ಅವರ ವಿಶಿಷ್ಟ
> ವ್ಯಕ್ತಿತ್ವ ಡಾ. ಎ. ಎನ್.  ಉಪಾಧ್ಯೆ ಅಂತಹ ಮಹಾನ್ ಸಂಶೋಧಕರನ್ನೂ ವಿಸ್ಮಿತಗೊಳಿಸಿದೆ.
>  ಗೋವಿಂದ ಪೈ ಅವರ ಸಂಶೋಧನ ಪ್ರಬಂಧಗಳನ್ನು ಸಾವಧಾನವಾಗಿ ಪರಿಶೀಲಿಸಿದಲ್ಲಿ  ಅವರ
> ಪ್ರತಿಯೊಂದು ಲೇಖನವೂ ಅಪೂರ್ವವಾದ ಗಣಿ ಎಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.
>  ಪಾರ್ಶ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮುಂತಾದ
> ಕೆಲವು ಲೇಖನಗಳನ್ನು ಇಲ್ಲಿ ಹೆಸರಿಸಬಹುದು.  ಗೋವಿಂದ ಪೈ ಸಂಶೋಧನ ಸಂಪುಟ 1995ರ ವರ್ಷದಲ್ಲಿ
> ಪ್ರಕಟವಾಗಿದೆ.
>
> ಗೋವಿಂದ ಪೈ ಅವರು ‘ಚಿತ್ರಭಾನು’, ‘ಹೆಬ್ಬೆರಳು’, ‘ತಾಯಿ’, ‘ಕಾಯಾಯ್ ಕೊಮಾಜಿ’ ಮುಂತಾದ
> ನಾಟಕಗಳನ್ನು ರಚಿಸಿದ್ದಾರೆ.  ‘ಕನ್ನಡದ ಮೊರೆ’ ಎಂಬ ಸಂಕಲನದಲ್ಲಿ ಅವರು ಬರೆದ ಹಲವು
> ವ್ಯಕ್ತಿ ಚಿತ್ರಗಳು, ಆತ್ಮ ಕಥನಗಳು ಮತ್ತು ಭಾಷಣಗಳು ಅಡಕವಾಗಿವೆ.  ಪ್ರಬಂಧಗಳಲ್ಲಿ
> ‘ಆತ್ಮಕಥನ’ ಅವರ ಸಾಹಿತ್ಯ ಕೃಷಿಯ ಮಥನದ ನವನೀತವೆನಿಸಿದೆ.  ‘ಬರಹಗಾರನ ಹಣೆಬರಹ’ ಲೇಖಕನ
> ಕಷ್ಟನಿಷ್ಟುರಗಳ ಕೈಗನ್ನಡಿಯಂತಿದೆ.  ‘ಕನಸಾದ ನನಸು’ ಪೈ ಅವರಿಗೆ ತಮ್ಮ ಗುರುಗಳಾದ
> ಪಂಜೆಯವರಲ್ಲಿದ್ದ ಪೂಜ್ಯಭಾವದ ಪ್ರತೀಕದಂತಿದೆ.  ಅವರ ಒಡನಾಡಿಗಳಾದ ಎಂ.ಎನ್. ಕಾಮತ್,
> ಕಿಲ್ಲೆ ಅವರ ಸ್ನೇಹದ ಬಗ್ಗೆ ಬರೆದಿರುವ ಅವರ ಬರಹಗಳು, ಎಂ.ಆರ. ಶ್ರೀನಿವಾಸ ಮೂರ್ತಿಗಳಿಗೆ
> ನೆನಪು, ಬೇಂದ್ರೆಯವರಿಗೆ ಐವತ್ತು ದಾಟಿದ್ದಕ್ಕೆ ಸಲ್ಲಿಸಿದ ಹರಕೆ ಇವೆಲ್ಲಾ ಮನನೀಯವೆನಿಸಿವೆ.
>
> ಇಂಥ ಮಹಾಚೇತನರಾದ ಗೋವಿಂದ ಪೈ ಅವರು ಸೆಪ್ಟಂಬರ್ 6, 1963ರಲ್ಲಿ ತಮ್ಮ ಎಂಭತ್ತನೆಯ
> ವಯಸ್ಸಿನಲ್ಲಿ ಈ ಲೋಕವನ್ನಗಲಿದರು.   ಅವರು ಬಿಟ್ಟು ಹೋಗಿರುವ ಸಾರಸ್ವತ ಸಂಪತ್ತು
> ಅಪಾರವಾಗಿರುವುದರಿಂದ, ಅವರ ಆ ಉಪಕಾರ ಸ್ಮರಣೆಗಾಗಿ ಕನ್ನಡಿಗರು ಅವರಿಗೆ
> ಚಿರಋಣಿಗಳಾಗಿದ್ದಾರೆ..
>
> ಸಂಗ್ರಹ
> ~ಕನ್ನಡಿಗ ಬಸವರಾಜು
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to