On 15-Jan-2018 12:47 PM, "Sameera samee" <mehak.sa...@gmail.com> wrote:

> ಪ್ರಕೃತ "ರಾಮಧಾನ್ಯ ಚರಿತ್ರೆ"ಯು ಕನಕದಾಸರಿಂದ ರಚಿತವಾದ ಒಂದು ಪುಟ್ಟ ವಿಡಂಬನ ಕಾವ್ಯ.
> ಇದೊಂದು ಕಲ್ಪಿತ ಕಥೆ. ರಾಗಿ(ನರೆದಲೆಗ) ಹಾಗೂ ಭತ್ತ(ವ್ರಿಹಿಗ)- ಇವರಿಬ್ಬರ ನಡುವೆ ಯಾರು
> ಹೆಚ್ಚು ಯಾರು ಕಡಿಮೆ ಎಂಬ ಜಗಳವು ಉದ್ಭವಿಸಲಾಗಿ, ರಾಮನು ಇವರಿಬ್ಬರ ವ್ಯಾಜ್ಯವನ್ನು
> ಪರಿಹರಿಸಿ ನರೆದಲೆಗವೇ ಉತ್ತಮವೆಂದು ಸಾರಿ ತೀರ್ಪನ್ನು ನೀಡುವುದು ಇಲ್ಲಿನ ಕಥಾಹಂದರ.
>
> ಆ ಕಾಲಕ್ಕೆ ಇದ್ದಿರಬಹುದಾದ ವರ್ಗ-ವರ್ಣ ತಾರತಮ್ಯಗಳ ಪ್ರತೀಕವಾಗಿ - ಉಚ್ಛ ವರ್ಗಗಳ
> ಪ್ರತಿನಿಧಿಯಾಗಿ ನೆಲ್ಲೂ, ಕೆಳವರ್ಗಗಳ ಪ್ರತಿನಿಧಿಯಾಗಿ ರಾಗಿಯೂ ಈ ಕಾವ್ಯದಲ್ಲಿ
> ಕಂಡುಬರುತ್ತವೆ. ಹೀಗಾಗಿ ’ರಾಮಧಾನ್ಯ ಚರಿತ್ರೆ’ಯನ್ನು ರೂಪಕ ಕಾವ್ಯವೆಂದೂ ಹೇಳಬಹುದು.
>
>
> ರಾವಣನನ್ನು ಸಂಹರಿಸಿದ ನಂತರ ರಾಮನು ಸೀತೆ, ಲಕ್ಷ್ಮಣ, ವಿಭೀಷಣ, ಹನುಮಂತ ಮುಂತಾದವರೊಂದಿಗೆ
> ಅಯೋಧ್ಯೆಗೆ ಮರಳುತ್ತಿರುವಾಗ, ಮಾರ್ಗಮಧ್ಯದಲ್ಲಿ ಮುನಿಗಳೆಲ್ಲರೂ ಇವರಿಗೆ ವಿವಿಧ
> ಧಾನ್ಯಗಳಿಂದ ಸಿದ್ಧಪಡಿಸಿದ ಭಕ್ಷ್ಯ-ಭೋಜನಗಳ ಔತಣವೊಂದನ್ನು ಏರ್ಪಡಿಸಿರುತ್ತಾರೆ. ಆಗ
> ಅವರಲ್ಲಿ ಸಹಜವಾಗಿ ಧಾನ್ಯಗಳಲ್ಲಿ ಯಾವುದು ಶ್ರೇಷ್ಠ ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಈ
> ಪ್ರಶ್ನೆಯೇ ’ರಾಮಧಾನ್ಯ ಚರಿತ್ರೆ’ಯ ಕಥಾಮೂಲ. ಇಲ್ಲಿಂದಲೇ ಭತ್ತ ಹಾಗೂ ರಾಗಿಯ ನಡುವೆ
> ಜಗಳವೇರ್ಪಡುವುದು.
>
>
> ಅವರಿಬ್ಬರ ನಡುವಿನ ಜಗಳವನ್ನು ನಿವಾರಿಸಿ ನ್ಯಾಯವನ್ನು ಹೇಳಲೆಂದು ರಾಮನು ಅವರಿಬ್ಬರನ್ನೂ
> ಆರು ತಿಂಗಳುಗಳ ಕಾಲ ಬಂಧನದಲ್ಲಿರಿಸುವಂತೆ ಹೇಳುತ್ತಾನೆ. ಆರು ತಿಂಗಳ ನಂತರ ಇವರಿಬ್ಬರನ್ನೂ
> ಸಭೆಗೆ ಕರೆಸಲಾಗಿ, ಆ ವೇಳೆಗೆ ಭತ್ತವು ಸೊರಗಿ ಟೊಂಕ ಮುರಿದು ಬಿದ್ದರೆ, ರಾಗಿಯು ಯಾವ
> ಕ್ಲೇಶಕ್ಕೂ ಒಳಗಾಗದೆ ಗಟ್ಟಿಯಾಗಿ ನಿಲ್ಲುತ್ತದೆ. ಕೊನೆಗೆ, ಆರು ತಿಂಗಳುಗಳ ನಂತರವೂ
> ಸ್ವಲ್ಪವೂ ಕಾಂತಿಗುಂದದ ರಾಗಿಗೇ ರಾಮನ ಸಭೆಯಲ್ಲಿ ಶ್ರೇಷ್ಠತೆಯ ಪಟ್ಟ ದೊರೆಯುತ್ತದೆ. ಇಡೀ
> ಸಭೆಯು ರಾಗಿಯನ್ನು ಮೆಚ್ಚಿ ಹಾರೈಸುತ್ತದೆ.
>
> ------------------------------------------------------------
> ------------------------------------------------
>
>
> ರಾಮಧಾನ್ಯ ಚರಿತ್ರೆ
>
>
>
> ರಾಮಧಾನ್ಯದ ಕೃತಿಯನೀ ಜನ
>
> ದಾಮವೆಲ್ಲಾದರಿಸುವಂದದಿ
>
> ಭೂಮಿಗಚ್ಚರಿಯಾಗಿ ಪೇಳುವೆನೀ ಮಹಾಕಥೆಯ
>
> ಪ್ರೇಮದಿಂದಾದರಿಸಿ ಕೇಳ್ದ ಸ
>
> ನಾಮರಿಗೆ ಸತ್ಕರುಣದಲಿ
>
> ರಾಮ ಪಾಲಿಸಿಕೊಡುವ ಮನದಲಿ ಇಷ್ಟಸಂಪದವ               (೩)
>
>
> ಧರೆಯನೆಲ್ಲವ ಸೋತು ಜೂಜಲಿ
>
> ಕುರುಪತಿಗೆ, ಕೈದಳಿಸಿ ತಮ್ಮಂ
>
> ದಿರು ಸಹಿತ ಧರ್ಮಜನು ಕಾಮ್ಯಕ ವನದೊಳಿರುತಿರಲು
>
> ಪರಮ ಋಷಿ ಶಾಂಡಿಲ್ಯ ಸ
>
> ತ್ಕರುಣದಲಿ ನಡೆತಂದನಲ್ಲಿಗೆ
>
> ವರ ತಪೋಧನರೊಡನೆ ಕಾಣಿಸಿಕೊಂಡನುಚಿತದಲಿ             (೪)
>
>
> ಧರಣಿಪತಿ ಧರ್ಮಜನು ತಮ್ಮಂದಿರೊಡಗೂಡಿ ಶಾಂಡಿಲ್ಯ ಮುನಿಗೆ ವಂದಿಸಿ ಸತ್ಕರಿಸಿದನು. ಆಗ
> ಶಾಂಡಿಲ್ಯ ಮುನಿಯು "ನೃಪಸಿರಿ - ದರಿದ್ರತೆ ನಿಲದು, ಪರಿಹಾರವಹುದು" ಎಂದು ನುಡಿಯುತ್ತಾನೆ.
> ಆಗ ಧರ್ಮಜನು :
>
>
> "ದೇವಋಷಿಗಳು ನಿಮ್ಮ ಕರುಣಾ
>
> ಭಾವವೆಮ್ಮಲ್ಲಿರಲು ನಮಗಿ
>
> ನ್ನಾವ ಕಷ್ಟದ ಬಳಕೆದೋರದು. ನಿಮ್ಮ ದರುಶನದಿ
>
> ಪಾವನರು ನಾವಾದೆವೆಮಗಿ
>
> ನ್ನಾವ ಬುದ್ಧಿಯನರುಹುವಿರಿಯದ
>
> ನೀವು ಪೇಳೆನೆ", ನಸುನಗುತ ಮುನಿನಾಥನಿಂತೆಂದ            (೬)
>
>
> "ದೇವಋಷಿಗಳು ನಿಮ್ಮ ಕರುಣೆ ನಮ್ಮ ಮೇಲಿರುವಾಗ ನಮಗೆ ಯಾವ ಕಷ್ಟವೂ ಬರದು. ನಿಮ್ಮ
> ದರ್ಶನದಿಂದ ನಾವು ಪಾವನರಾದೆವು ಸ್ವಾಮಿ, ನಮಗೆ ನೀವು ಯಾವ ವಿಷಯವನ್ನು ಅರುಹುವಿರಿ ಈಗ"
> ಎಂದು ಕೇಳಲು, ಶಾಂಡಿಲ್ಯ ಮುನಿಯು "ಯುಧಿಷ್ಟಿರ, ಭೂಮಿಯಲ್ಲಿ ಅಧಿಕವಾದ ಖ್ಯಾತಿಯನ್ನು
> ಹೊಂದಿರುವ ನಾಲ್ಕು ಅರಸುಗಳೆಂದರೆ - ನಳ, ರಾಮ, ಯುಧಿಷ್ಟಿರ ಹಾಗೂ ಹರಿಶ್ಚಂದ್ರ ಎಂದು
> ಜಗವೆಲ್ಲ ಸಾರುತ್ತಿದೆ. ಅವರಲ್ಲಿ ರಾಮನು ಅತ್ಯಂತ ಗುಣಶೀಲನಾಗಿದ್ದಾನೆ. ಒಮ್ಮೆ
> ನೆಲ್ಲು(ವ್ರಿಹಿಗ) ಹಾಗೂ ರಾಗಿ(ನರೆದಲೆಗ)ಗಳ ನಡುವೆ ಮೂಡಿದ್ದ ಜಗಳವನ್ನು ನಿವಾರಿಸಿ,
> ಸರಿಯಾದ ನ್ಯಾಯವನ್ನು ಹೇಳಿ ಶ್ರೀರಾಮನು ಧರ್ಮವನ್ನು ಪಾಲಿಸಿದ" ಎಂದು ತಿಳಿಸುತ್ತಾನೆ.
>
>
> ಆಗ ಧರ್ಮರಾಯನು ರಾಮಚರಿತೆಯನ್ನು ತಮಗೆ ಹೇಳಬೇಕೆಂದು ಶಾಂಡಿಲ್ಯ ಮುನಿಯನ್ನು ಬಿನ್ನವಿಸಲು,
> ಆ ಮುನಿಪನು ಅಲ್ಲಿದ್ದವರಿಗೆಲ್ಲ ರಾಮನ ಕಥೆಯನ್ನು ವಿಸ್ತರಿಸಿ ಹೆಳುತ್ತಾನೆ. :
>
>
> ಕೇಳು ಕುಂತೀ ತನಯ, ಗಂಗಾ ನದಿಯ ದಡದ ಉತ್ತರ ಭಾಗದಲ್ಲಿ ವಿಶಾಲವಾಗಿಯೂ, ವೈಭವಯುತವಾಗಿಯೂ
> ಇರುವ ಅಯೋಧ್ಯಾಪುರ. ಆ ಪುರದ ಅರಸ ದಶರಥ. ಅವನಿಗೆ ಕೌಸಲ್ಯೆ, ಕೈಕೆ ಹಾಗೂ ಸುಮಿತ್ರೆ - ಈ
> ಮೂವರು ಅರಸಿಯರು.
>
> ಆ ದಶರಥ ಹಾಗೂ ಕೌಸಲ್ಯೆಯರಿಗೆ ಜನಿಸಿದ ಗುಣನಿಧಿ ಆ ರಾಮ. ಅವನು ತಾಟಕಿಯೆಂಬ ರಾಕ್ಷಸಿಯನ್ನು
> ಸಂಹರಿಸಿ, ಮಾರೀಚ-ಸುಬಾಹುಗಳನ್ನು ಕೊಂದು, ವಿಶ್ವಾಮಿತ್ರ ಮುನಿಯು ನಡೆಸುತ್ತಿದ್ದ
> ಮಖ(ಯಾಗ)ವನ್ನು ಯಾವುದೇ ವಿಘ್ನ ಬಾರದಂತೆ ರಕ್ಷಿಸಿದನು. ಆ ನಂತರದಲ್ಲಿ ರಾಮನು ಗೌತಮನ ಸತಿ
> ಅಹಲ್ಯೆಯ ಶಾಪವನ್ನು ನಿವಾರಿಸಿ, ತನ್ನ ತಮ್ಮ ಲಕ್ಷ್ಮಣ ಹಾಗೂ ಮುನಿ ವಿಶ್ವಾಮಿತ್ರನೊಡಗೂಡಿ
> ಮಿಥಿಲಾನಗರಕ್ಕೆ ಬಂದನು.
>
> ಮುಂದೆ, ಅಲ್ಲಿನ ಅರಸನಾದ ಜನಕನ ಮಗಳು ಸೀತೆಯ ಸ್ವಯಂವರದಲ್ಲಿ ಶಿವಧನುಸ್ಸನ್ನು ಹೆದೆಯೇರಿಸಿ
> ಮುರಿದು, ಶುಭಮುಹೂರ್ತದಲ್ಲಿ ರಾಮನು ಸೀತೆಯನ್ನು ವರಿಸಿದನು. ಆ ನಂತರದಲ್ಲಿ ರಾಮನು
> ತನ್ನವರೊಡಗೂಡಿ ಅಯೋಧ್ಯೆಗೆ ಹೊರಟುಬಂದನು.
>
>
> ಕೇಳು ಧರ್ಮಜ, ರಾಮನಿಗೆ ಕೂಡ ನಿಮ್ಮಂತೆಯೇ ವನವಾಸ ಮಾಡಬೇಕಾಗಿ ಬಂತು. ಪಿತೃವಚನ
> ಪಾಲನೆಗೆಂದು ರಾಮನು ತನ್ನ ಮಡದಿ ಸೀತೆ ಹಾಗೂ ಲಕ್ಷ್ಮಣರೊಂದಿಗೆ ಘೋರವಾದ ಕಾನನದಲ್ಲಿ
> ಇರಬೇಕಾಯಿತು.
>
> "ಭರತನನು ಸಂತೈಸಿ, ಕಾಕಾಸುರನ ಪ್ರಾಣವ ಕಾಯ್ದು, ದಾನವ ತರುಣಿ ನಾಸಿಕವರಿದು, ಮಾಯಾಮೃಗವ
> ಸಂಹರಿಸಿ, ಸರಸಿಜಾಕ್ಷಿಯನಗಲಿ, ಮಾರ್ಗಾಂತರದಿ ಕಂಡ ಜಟಾಯುವನು - ಮನ ಮರುಗಿ ವೃತ್ತಾಂತವನು
> ತಿಳಿದವನಲ್ಲಿ ಗತಗೊಳಿಸಿ..(೧೩)"
>
>
> ಸೀತೆಯನ್ನು ಹುಡುಕಿ ಹೊರಟ ರಾಮಲಕ್ಷ್ಮಣರಿಗೆ ಸಾವಿನ ಅಂಚಿನಲ್ಲಿದ್ದ ಜಟಾಯುವು
> ಕಾಣಿಸುತ್ತಾನೆ. ಅವನಿಂದ ರಾಮನು ನಡೆದ ವೃತ್ತಾಂತವನ್ನು(ಸೀತಾ ಅಪಹರಣ, ಹಾಗೂ ರಾವಣನನ್ನು
> ಎದುರಿಸಿದ ಜಟಾಯುವನ್ನು ರಾವಣನು ಗಾಯಗೊಳಿಸಿದ್ದು) ಕೇಳಿ ತಿಳಿದುಕೊಳ್ಳುತ್ತಾನೆ. ಇಷ್ಟನ್ನೂ
> ತಿಳಿಸುವ ವೇಳೆಗೆ ಜಟಾಯುವು ಮೃತನಾಗುತ್ತಾನೆ. ಅವನ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ
> ನಂತರ ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಹೊರಡುತ್ತಾರೆ.
>
> ಮಾರ್ಗ ಮಧ್ಯದಲ್ಲಿ ಹನುಮನನ್ನು ಕಂಡು, ಕಿಷ್ಕಿಂದೆಯನ್ನು ತಲುಪಿ, ಅಲ್ಲಿ ವಾಲಿಯನ್ನು
> ಹರಿಸಿ, ಸುಗ್ರೀವನು ಕಳುಹಿಸಿದ ವಾನರ ಸೈನ್ಯವನ್ನು ಒಡಗೊಂಡು ರಾಮನು ದಕ್ಷಿಣಕ್ಕೆ ಹೊರಟನು.
> ಸಮುದ್ರವನ್ನು ದಾಟಲು ಸೇತುಬಂಧವನ್ನು ನಿರ್ಮಿಸಿ, ಲಂಕೆಯನ್ನು ತಲುಪಿ, ರಾವಣ ಕುಂಭಕರ್ಣಾದಿ
> ದಾನವ ವೀರರನ್ನು ಕೊಂದು, ರಾಮನು ನಂತರದಲ್ಲಿ ವಿಭೀಷಣನಿಗೆ ಪಟ್ಟವನ್ನು ಕಟ್ಟಿದನು.
>
>
> ಆ ನಂತರ ರಾಮನು ಸೀತೆಯನ್ನು ಕೈಕೊಂಡು, ತಮ್ಮೊಡನೆ ಅಯೋಧ್ಯೆಗೆ ಬರಲು ವಿಭೀಷಣನನ್ನೂ
> ಅಹ್ವಾನಿಸುತ್ತಾನೆ. ಅಗ ಅಗಣಿತ ದಾನವ ಸೇನೆಯು ಅವರೊಡನೆ ಅಯೋಧ್ಯೆಗೆ ಹೊರಡಲು ಸಿದ್ಧವಾಯ್ತು.
>
> ವಿಭೀಷಣನು ತನಗೆಂದು ಅರ್ಪಿಸಿದ ಕುಬೇರನ ರಥದಲ್ಲಿ ರಾಮನು ಸೀತೆ ಹಾಗೂ ಲಕ್ಷ್ಮಣರೊಡನೆ
> ಕುಳಿತಿರಲು, ಅವರೊಡನೆ ಹನುಮ, ಜಾಂಬವಂತ, ವಿಭೀಷಣಾದಿಯಾಗಿ, ದಾನವ ಹಾಗೂ ವಾನರ ಸೈನ್ಯವೂ
> ಅಯೋಧ್ಯೆಯೆಡೆಗೆ ಹೊರಡುತ್ತಾರೆ.
>
>
> ಮಾರ್ಗ ಮಧ್ಯದಲ್ಲಿ ಇವರೆಲ್ಲ ವಾಲ್ಮೀಕಿ, ಮುಚುಕುಂದ ಮುಂತಾದ ಮುನಿಗಳ ಆಶ್ರಮಗಳನ್ನು
> ಸಂದರ್ಶಿಸಿದರು. ನಂತರ ಮುಂದುವರೆದು ಇವರೆಲ್ಲ ಮಾಹವನವೊಂದರಲ್ಲಿ ಬೀಡುಬಿಟ್ಟಿರಲು ಹಲವಾರು
> ಮುನಿವರರು ಬಂದು ರಾಮನನ್ನು ಕಂಡರು.
>
>
> ಕೌಶಿಕನು, ಜಮದಗ್ನಿ, ಜನ್ಹು, ಪರಾಶರನು, ಜಾಬಾಲಿ, ಭೃಗು, ದೂರ್ವಾಸ, ಗೌತಮನಾದಿಯಾದ ಸಮಸ್ತ
> ಮುನಿವರರು ಭಾಸುರದ ತೇಜದಲಿ ತಮ್ಮ ನಿವಾಸವನು ಹೊರವಂಟು ಬಂದರು, ದಾಶರಥಿಯನು ಕಂಡು
> ಹರಸಿದರಕ್ಷತೆಯ ತಳಿದು (೨೩)
>
>
> ಅವರೆಲ್ಲ ರಾಮನನ್ನು ಮನಸಾರೆ ಪ್ರಾರ್ಥಿಸಿ, ಹೊಗಳಿ, ವಿವಿಧ ಬಗೆಯಲ್ಲಿ ಸತ್ಕರಿಸಿದರು.
>
>
> ಅಲ್ಲಿ ನೆರೆದ ಮಹಾಮುನೀಶ್ವರ
>
> ರೆಲ್ಲ ತರಿಸಿದರಖಿಳ ವಸ್ತುವ -
>
> ಬೆಲ್ಲ, ಸಕ್ಕರೆ, ಜೇನುತುಪ್ಪ, ರಸಾಯನಂಗಳಲಿ
>
> ಭುಲ್ಲವಿಸಿ ರಚಿಸಿದ ಸುಭಕ್ಷಗ
>
> ಳೆಲ್ಲವನು ತುಂಬಿದರು ಹೆಡಗೆಗ
>
> ಳಲ್ಲಿ. ಜೋಡಿಸಿ, ಹೊರಿಸಿ ತಂದರು ರಾಮನೋಲಗಕೆ           (೨೮)
>
>
> ರಾಮನೊಡನೆ ಬಂದವರೆಲ್ಲ ಆ ರುಚಿರುಚಿಯಾದ ಭೋಜ್ಯಗಳೆಲ್ಲವನ್ನು ಮನಸಾರೆ ಸವಿದರು. ಅವರೆಲ್ಲ
> ಮುನಿವರರನ್ನು ಆನಂದದಿಂದ ಕೊಂಡಾಡಿದರು. ಆಗ ರಾಮನು ಹನುಮನನ್ನು ಕರೆದು ಆ ಭಕ್ಷ್ಯಗಳ
> ರುಚಿಯನ್ನು ಕುರಿತು ಪ್ರಶ್ನಿಸಿದನು -
>
>
> ಅನಿಲಸುತ ಬಾರೆಂದು ರಘುನಂ
>
> ದನನು "ಕರುಣದೊಳಿವರ ರುಚಿಯೆಂ
>
> ತೆನಲು", ಕರಗಳ ಮುಗಿದು ಬಿನ್ನೈಸಿದನು ರಘುಪತಿಗೆ
>
> ’ಇನಕುಲಾನ್ವಯತಿಲಕ ಚಿತ್ತೈ
>
> ಸೆನಗೆ ಸವಿಯಹುದಿನ್ನು ಧಾನ್ಯದ
>
> ತನುವನೀಕ್ಷಿಸಬೇಕು, ದೇವರು ತರಿಸಿ ನೀವೆಂದ’                 (೨೯)
>
>
> ಆಗ ಹನುಮನು ’ಭಕ್ಷ್ಯಗಳೇನೋ ಬಹಳ ರುಚಿಯಾಗಿವೆ. ಆದರೆ ಈ ಭಕ್ಷ್ಯಗಳನ್ನು ಯಾವ ಯಾವ
> ಧಾನ್ಯಗಳಿಂದ ತಯಾರಿಸಿದ್ದಾರೋ ಆ ಧಾನ್ಯಗಳನ್ನೆಲ್ಲ ಒಮ್ಮೆ ತಾನು ನೋಡಬೇಕು. ದಯವಿಟ್ಟು ತಾವು
> ಆ ಧಾನ್ಯಗಳನ್ನು ತರಿಸಿ’ ಎಂದು ರಾಮನನ್ನು ಕೇಳುತ್ತಾನೆ.
>
> ಹಾಗೇ ಆಗಲಿ ಎಂದು ರಾಮನು ಗೌತಮ ಮುನಿಯನ್ನು ’ಧಾನ್ಯಗಳನ್ನು ತರಿಸಬೇಕು’ ಎಂದು ವಿನಯದಿಂದ
> ಕೇಳಿಕೊಳ್ಳುತ್ತಾನೆ. ಆಗ ಗೌತಮ ಮುನಿಯ ಶಿಷ್ಯರು ಎಲ್ಲ ತರದ ಧಾನ್ಯಗಳನ್ನೂ ಹೊತ್ತು ತಂದು
> ಅಲ್ಲಿದ್ದವರೆಲ್ಲರ ಮುಂದಿಡುತ್ತಾರೆ.
>
>
> "ನರೆದಲೆಗನಿದು, ನೆಲ್ಲು, ಹಾರಕ, ಬರಗು, ಜೋಳವು, ಕಂಬು, ಸಾಮೆಯು, ಉರುತರದ ನವಣೆಯಿದು
> ನವಧಾನ್ಯ"ವೆಂದೆನಲು, ಮೆರೆವ ರಾಶಿಯ ಕಂಡು - ’ಇದರೊಳು ಪರಮಸಾರದ ಹೃದಯನಾರೆಂದರಸಿ’
> ಕೇಳಿದನಲ್ಲಿರುತಿಹ ಮಹಾಮುನೀಶ್ವರರ                   (೩೨)
>
> (೧. ನರೆದಲೆಗ: ರಾಗಿ, ೨. ನೆಲ್ಲು: ಭತ್ತ. ೩. ಹಾರಕ, ಬರಗು, ಕಂಬು, ಸಾಮೆ, ನವಣೆ -
> ಬಗೆಬಗೆಯ ಇತರ ಧಾನ್ಯಗಳು).
>
> ಎಲ್ಲ ಧಾನ್ಯಗಳ ಹೆಸರುಗಳನ್ನೂ ಒಂದೊಂದಾಗಿ ಹೇಳುತ್ತಿರಲು, ರಾಮನು - "ಈ ಧಾನ್ಯಗಳಲ್ಲಿ
> ಉತ್ತಮವಾದದ್ದು ಯಾವುದು?" ಎಂದು ಅಲ್ಲಿದ್ದ ಮುನಿಗಳನ್ನು ಕೇಳುತ್ತಾನೆ. ಆಗ
>
>
> ಕೆಲರು ಗೋದಿಯ, ಸಾಮೆಯನು ಕೆಲ
>
> ಕೆಲರು ನವಣೆಯ, ಕಂಬು, ಜೋಳವ
>
> ಕೆಲರು ಹಾರಕವೆಂದು, ಕೆಲವರು ನೆಲ್ಲನತಿಶಯವ,
>
> ಕೆಲರು ನರೆದಲಗನನು ಪತಿಕರಿ
>
> ಸಲದ ನೋಡಿದ ನೃಪತಿ"ಯದರೊಳು
>
> ಹಲವು ಮತವೇಕೊಂದನೇ ಪೇಳೆನಲು", ಗೌತಮನು:              (೩೩)
>
>
> (ಅಲ್ಲಿದ್ದ ಕೆಲವರು ಗೋಧಿಯನ್ನೂ, ಕೆಲವರು ಸಾಮೆಯನ್ನೂ, ಕೆಲವರು ಇತರ ಧಾನ್ಯಗಳನ್ನೂ,
> ಕೆಲವರು ಭತ್ತವನ್ನೂ, ಹಾಗೇ ಇನ್ನೂ ಕೆಲವರು ರಾಗಿಯನ್ನೂ ಪತಿಕರಿಸಿ(ಪತಿಕರಿಸು:
> ಅಂಗೀಕರಿಸು/ಹೊಗಳು) ನುಡಿದರು. ಆಗ ರಾಮನು "ಹೀಗೆಹಲವು ಅಭಿಪ್ರಾಯಗಳೇಕೆ, ಯಾವುದಾದರೂ
> ಒಂದನ್ನು ಒಪ್ಪಿ ಹೇಳಿ" ಎನ್ನಲು, ಗೌತಮನು..)
>
>
> ದಾಶರಥಿ ಚಿತ್ತೈಸು ನಮ್ಮಯ
>
> ದೇಶಕತಿಶಯ ನರೆದಲೆಗನೇ
>
> ವಾಸಿಯುಳ್ಳವನೀತ ಮಿಕ್ಕಿನ ಧಾನ್ಯವೇಕೆನಲು
>
> "ಲೇಸನಾಡಿದೆ ಮುನಿಪ ಗೌತಮ
>
> ದೋಷರಹಿತನು ಪಕ್ಷಪಾತವ
>
> ನೀಸು ಪರಿಯಲಿ ಮಾಡುವರೆ ಶಿವ"ಯೆಂದನಾ ವ್ರಿಹಿಗ           (೩೪)
>
>
> "ಎಲ್ಲ ಧರ್ಮದ ಸಾರವನು ನೀವ್
>
> ಬಲ್ಲಿರರಿಯಿರೆ ಎಲ್ಲರನು ನೀ
>
> ವಿಲ್ಲಿ ನುಡಿವ ಉಪೇಕ್ಷೆಯುಂಟೇ! ಸಾಕದಂತಿರಲಿ,
>
> ನೆಲ್ಲು ನಾನಿರೆ, ಗೋದಿ ಮೊದಲಾ
>
> ದೆಲ್ಲ ಧಾನ್ಯಗಳಿರಲು ಇದರಲಿ
>
> ಬಲ್ಲಿದನು ನರೆದಲೆಗನೆಂಬುದಿದಾವ ಮತ?"ವೆಂದ               (೩೫)
>
>
> ಗೌತಮನು "ಕೇಳು ದಾಶರಥಿ, ನಮ್ಮ ದೇಶಕ್ಕೆ ಅತಿಶಯವಾದ ಈ ನರೆದಲೆಗನೇ(ರಾಗಿ)
> ಮಿಕ್ಕೆಲ್ಲವುಗಳಿಗಿಂತ ಉತ್ತಮವಾದ ಧಾನ್ಯ. ಏಕೆಂದರೆ.." ಎಂದು ನುಡಿಯುತ್ತಿರುವಷ್ಟರಲ್ಲೇ
> ಅಲ್ಲಿದ್ದ ನೆಲ್ಲಿಗೆ(ವ್ರಿಹಿಗ: ನೆಲ್ಲು) ರೋಷವುಕ್ಕುತ್ತದೆ.
>
> ಕೂಡಲೆ ನೆಲ್ಲು ಸಿಡಿದೆದ್ದು ಗೌತಮನನ್ನು ಕುರಿತು "ಆಹಾ! ಲೇಸನಾಡಿದಿರಿ ಗೌತಮರೇ,
> ದೋಷರಹಿತರಾದ ನೀವೂ ಹೀಗೆ ಪಕ್ಷಪಾತದಿಂದ ನುಡಿಯಬಹುದೇ. ಶಿವಶಿವಾ!
>
> ಎಲ್ಲ ಧರ್ಮಗಳ ಸಾರವನ್ನೂ ಅರಿತ ನೀವು ಹೀಗೆ ಉಪೇಕ್ಷಿಸಿ ನುಡಿಯುವುದು ಸರಿಯೇ? ಅಲ್ಲ,
> ನೆಲ್ಲು ನಾನಿರುವಾಗ, ಗೋಧಿ ಮುಂತಾದ ಎಲ್ಲ ಧಾನ್ಯಗಳೂ ಇಲ್ಲಿರುವಾಗ ಇವರೆಲ್ಲರಲ್ಲಿ ಈ
> ರಾಗಿಯೇ ಶ್ರೇಷ್ಠ ಎಂದು ಹೇಳುವುದು ಎಷ್ಟು ಸರಿ. ಇದಾವ ನ್ಯಾಯ?" ಎಂದು ಗೌತಮನನ್ನು
> ಪ್ರಶ್ನಿಸುತ್ತದೆ ನೆಲ್ಲು.
>
> ಸಮೀರ ( ಕನ್ನಡ ಭಾಷಾ ಶಿಕ್ಷಕಿ
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> -https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "KannadaSTF - ಕನ್ನಡ ಭಾಷಾ ಶಿಕ್ಷಕರ ವೇದಿಕೆ" group.
> To unsubscribe from this group and stop receiving emails from it, send an
> email to kannadastf+unsubscr...@googlegroups.com.
> To post to this group, send email to kannadastf@googlegroups.com.
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
For more options, visit https://groups.google.com/d/optout.

Reply via email to