http://kanaja.in/archives/127928

*ವಿಜ್ಞಾನ ದಿನ ಮತ್ತು ವೈಜ್ಞಾನಿಕ ಮನೋವೃತ್ತಿ*

ಪ್ರತಿ ವರ್ಷ ಫೆಬ್ರುವರಿ 28ರಂದು ನಾವು ಭಾರತೀಯರು ‘ವಿಜ್ಞಾನ ದಿನ’ವನ್ನು ಆಚರಿಸುತ್ತೇವೆ.
ಏಕೆಂದರೆ ಫೆಬ್ರುವರಿ 28 ಅನ್ನೋದು ‘ರಾಮನ್ ಎಫೆಕ್ಟ್’ ಪ್ರಕಟವಾದ ದಿನ. ಬೆಳಕಿನ ಪ್ರತಿಫಲನದ
ಕುರಿತು ಬೆಂಗಳೂರಿನ ಪ್ರೊ. ಸಿ.ವಿ. ರಾಮನ್ ನಡೆಸಿದ ಆ ಸಂಶೋಧನೆಗೆ ‘ರಾಮನ್ ಎಫೆಕ್ಟ್’
ಎಂತಲೇ ಜಾಗತಿಕ ಖ್ಯಾತಿ ಬಂದಿದೆ ಅಷ್ಟೇ ಅಲ್ಲ, ಅವರಿಗೆ ಹಾಗೂ ನಮ್ಮ ದೇಶಕ್ಕೆ ವಿಜ್ಞಾನದ
ಮೊದಲ ನೊಬೆಲ್ ಪ್ರಶಸ್ತಿಯನ್ನೂ ಅದು ತಂದು ಕೊಟ್ಟಿದೆ. ಅದರ ನೆನಪಿಗಾಗಿ ಫೆಬ್ರುವರಿ 28ನ್ನು
‘ರಾಷ್ಟ್ರೀಯ ವಿಜ್ಞಾನ ದಿನ’ವನ್ನಾಗಿ ಆಚರಿಸಲಾಗುತ್ತಿದೆ.
ವೈಜ್ಞಾನಿಕ ಮನೋಭಾವ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿರಬೇಕು ಎಂಬ ಅಂಶವನ್ನು ನಾವು
ಭಾರತೀಯರು ನಮ್ಮ ಸಂವಿಧಾನದಲ್ಲೇ ಅಳವಡಿಸಿಕೊಂಡಿದ್ದೇವೆ. ಅದನ್ನು ಮತ್ತೆ ಮತ್ತೆ
ನೆನಪಿಸಿಕೊಳ್ಳಬೇಕಾದ ದಿನ ಫೆಬ್ರುವರಿ 28. ನೆನಪಿಡಬೇಕಾದ ಸಂಗತಿ ಏನೆಂದರೆ, ಫೆಬ್ರುವರಿ 28
(1928) ಸರ್ ಸಿ.ವಿ. ರಾಮನ್ನರ ಹುಟ್ಟುಹಬ್ಬ ಅಲ್ಲ, ಆದರೆ ಅವರ ಆ ಮಹತ್ವದ ಸಂಶೋಧನೆ
ಪ್ರಕಟವಾದ ದಿನ. ಅದು ಪ್ರಕಟವಾಗಿ ಎರಡು ವರ್ಷಗಳ ನಂತರ, 1930ರಲ್ಲಿ ಸರ್ ರಾಮನ್ ಅವರಿಗೆ
ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಯಿತು. ಹಾಗಾಗಿ ಫೆಬ್ರುವರಿ 28 ರಾಮನ್ನರನ್ನು ಮತ್ತು
ವಿಜ್ಞಾನವನ್ನು ಗೌರವಿಸಬೇಕಾದ ದಿನ.
ವಿಜ್ಞಾನವನ್ನು ನಾವು ಯಾಕೆ ಗೌರವಿಸಬೇಕು ಅಂದರೆ, ಅದು ನಮ್ಮನ್ನು ನಾಗರಿಕರನ್ನಾಗಿ ಮಾಡಿದೆ.
ನಮ್ಮಲ್ಲಿ ‘ವೈಜ್ಞಾನಿಕ ಶೋಧ ಬುದ್ಧಿ’ ಇಲ್ಲದೇ ಇದ್ದಿದ್ದರೆ ನಾವೂ ಇತರ ಪ್ರಾಣಿಗಳ ಹಾಗೆ
ಗುಹೆಯಲ್ಲೊ ಮರದ ಪೊಟರೆಯಲ್ಲೊ, ಬಂಡೆಗಳ ಸಂದುಗಳಲ್ಲೊ ಚಳಿಗೆ ಮಳೆಗೆ, ರೋಗರುಜಿನೆಗಳಿಗೆ
ತುತ್ತಾಗುತ್ತ ಹೇಗೋ ಬದುಕುತ್ತಿದ್ದೆವು.
ಆಧುನಿಕ ವಿಜ್ಞಾನ ನಮಗೆ ಹೇಗೆಲ್ಲ ಸಹಾಯ ಮಾಡಿದೆ ಅನ್ನೋದನ್ನು ನೋಡಬೇಕಾದರೆ ನಾವು ಹಿಂದಿನ
ಕಾಲದ ರಾಜ ಮಹಾರಾಜರ ಬದುಕನ್ನು ಹೋಲಿಸಿ ನೋಡಬೇಕು. ಎಷ್ಟೇ ಬಲಾಢ್ಯ ರಾಜನಾಗಿದ್ದರೂ ಅವನಿಗೆ
ಹಲ್ಲು ನೋವು ಬಂದರೆ ವಾರಗಟ್ಟಲೆ, ತಿಂಗಳುಗಟ್ಟಲೆ ತೀರ ದುರ್ಬಲನಾಗುತ್ತಿದ್ದ. ಕುದುರೆ ಅಥವಾ
ರಥದ ಮೇಲೆ ಹೆಚ್ಚೆಂದರೆ ದಿನಕ್ಕೆ 15-20 ಮೈಲು ಸವಾರಿ ಮಾಡಬಹುದಿತ್ತು. ಬೆನ್ನು ನೋವು
ಬಂದರೆ ಅಲ್ಲೇ ವಾರಗಟ್ಟಲೆ ತಿಂಗಳುಗಟ್ಟಲೆ ನೋವಿನಿಂದ ನರಳಬೇಕಿತ್ತು. 50-60 ವರ್ಷಕ್ಕೆ
ವೃದ್ಧಾಪ್ಯ ಬಂತೆಂದರೆ ಹಲ್ಲುಗಳು ಉದುರಿ, ಕಣ್ಣೆಲ್ಲ ಮಂಜಾಗಿ, ಮೊಣಕಾಲು ನೋವು, ಕಿವುಡುತನ
ಏನೆಲ್ಲ ಬರುತ್ತಿತ್ತು. ಸಿಡುಬು, ಪ್ಲೇಗಿನಂಥ ಮಹಾಮಾರಿ ಬಂದರಂತೂ ಎಂಥ ಮಹಾಸೈನ್ಯವನ್ನೂ
ಹೊಸೆದು ಹಾಕುತ್ತಿತ್ತು.
ಇಂದಿನ ಕಾಲದ ತೀರ ಸಾಮಾನ್ಯ ಜನರೂ ಹಿಂದಿನ ಕಾಲದ ಮಹಾರಾಜರಿಗಿಂತ ಸುಖಿಗಳಾಗಿದ್ದೇವೆ.
ಏನೆಲ್ಲ ರೋಗ ರುಜಿನಗಳನ್ನು ನಾವು ಜೈಸಿದ್ದೇವೆ. ಎಷ್ಟೆಲ್ಲ ಬಗೆಯ ಹಾವು, ಹುಲಿ, ಚೇಳು,
ಹುಚ್ಚುನಾಯಿ, ಬೆಂಕಿ, ಬರಗಾಲ, ಚಳಿ, ಎಲ್ಲವನ್ನೂ ಜೈಸಿದ್ದೇವೆ. ಹಸಿವೆಯನ್ನು ದೂರ
ಅಟ್ಟಿದ್ದೇವೆ. ಅದೆಲ್ಲ ವಿಜ್ಞಾನ- ತಂತ್ರಜ್ಞಾನದಿಂದ ಸಾಧ್ಯವಾಗಿದೆ. ಇಡೀ ಜಗತ್ತನ್ನು ನಾವು
ಕೂತಲ್ಲೇ ಸಂಪರ್ಕಿಸುತ್ತೇವೆ; ಬೇಕೆಂದರೆ ಒಂದು ದಿನದಲ್ಲೇ ಸುತ್ತಿ ಬರುತ್ತೇವೆ.
ಹಾಗೆ ನೋಡಿದರೆ ನಾವು ತೀರ ದುರ್ಬಲ ಜೀವಿಗಳು. ತೀರ ಪರಾವಲಂಬಿಗಳು. ಒಂದು ಹುಲ್ಲು
ಗರಿಕೆಯನ್ನೇ ನೋಡಿ: ಅದಕ್ಕೆ ತುಸು ಬಿಸಿಲು, ತುಸು ನೀರು, ತುಸು ಮಣ್ಣು ಇದ್ದರೆ ಸಾಕು ತನ್ನ
ಆಹಾರವನ್ನು ತಾನೇ ತಯಾರಿಸಿಕೊಳ್ಳುತ್ತದೆ. ನಮಗೆ ಅದು ಸಾಧ್ಯವಿಲ್ಲ. ಬೀದಿನಾಯಿಗೆ
ಹೊಟ್ಟೆಶೂಲೆ ಬಂದರೆ ಅದು ಎಂಥದ್ದೊ ಸಸ್ಯವನ್ನು ತಿಂದು ವಾಂತಿ ಮಾಡಿಕೊಂಡು ಸರಿಯಾಗುತ್ತದೆ.
ಗಾಯವಾದರೆ ಅದು ತನ್ನದೇ ಜೊಲ್ಲಿನಿಂದಲೋ ಅಥವಾ ಬೂದಿಗುಡ್ಡೆಯ ದೂಳಿನಿಂದಲೋ ತನ್ನ ಗಾಯವನ್ನು
ತಾನೇ ವಾಸಿ ಮಾಡಿಕೊಳ್ಳುತ್ತದೆ. ನಮಗೆ ಅದು ಸಾಧ್ಯವಿಲ್ಲ. ಇರುವೆ ಗೆದ್ದಲುಗಳಿಗೆ ಮಳೆ ಬರುವ
ಸೂಚನೆ ಮೊದಲೇ ಗೊತ್ತಾಗುತ್ತದೆ. ವನ್ಯಪ್ರಾಣಿಗಳಿಗೆ ಭೂಕಂಪನದ ಮುನ್ಸೂಚನೆ ಮೊದಲೇ
ಗೊತ್ತಾಗುತ್ತದೆ. ತಿಮಿಂಗಲುಗಳಿಗೆ ಸುನಾಮಿಯ ಸೂಚನೆ ಗೊತ್ತಾಗುತ್ತದೆ. ಪಾತರಗಿತ್ತಿಗಳಿಗೆ
ಸುಂಟರಗಾಳಿಯ ಮುನ್ಸೂಚನೆ ಸಿಗುತ್ತದೆ. ಮರದ ಮೇಲೆ ಗೂಡು ಕಟ್ಟಿಕೊಂಡ ಪಕ್ಷಿಗೆ ಹಾವು
ಬರುತ್ತಿದೆ ಎಂಬುದು ನಡುರಾತ್ರಿಯಲ್ಲೂ ವಾಸನೆಯ ಮೂಲಕವೇ ಗೊತ್ತಾಗುತ್ತದೆ.
ನಮಗೆ ಅಂಥ ಯಾವ ಸೂಚನೆಗಳೂ ಸಿಗುವುದಿಲ್ಲ; ನಮ್ಮ ಸಂವೇದನೆಗಳೆಲ್ಲ ಮೊಂಡಾಗಿವೆ.
ಸವೆದುಹೋಗಿವೆ. ಆದರೆ ನಮ್ಮ ಬುದ್ಧಿಶಕ್ತಿ ಚುರುಕಾಗಿದೆ. ಹಿಂದಿನ ಕಾಲದಲ್ಲಿ ರಾವಣಾಸುರ
ಅಷ್ಟ ದಿಕ್ಪಾಲಕರನ್ನು ತನ್ನ ಊಳಿಗದಲ್ಲಿ ಇಟ್ಟುಕೊಂಡಿದ್ದ ಎಂಬ ಕತೆಯನ್ನು ಕೇಳಿದ್ದೇವೆ.
ನಾವು ಇಂದು ಅಷ್ಟ ದಿಕ್‍ಪಾಲಕರನ್ನು, ಪಂಚ ಮಹಾಭೂತಗಳನ್ನು ನಮಗೆ ಬೇಕೆಂದಂತೆ
ದುಡಿಸಿಕೊಳ್ಳುತ್ತೇವೆ. ಬೆಂಕಿಯನ್ನು ನಮಗಿಷ್ಟ ಬಂದ ಹಾಗೆ ಪಳಗಿಸುತ್ತೇವೆ. ಬೆಂಕಿಯ
ಉಗ್ರಜ್ವಾಲೆಯಲ್ಲಿ ಮರಳನ್ನೂ ಕರಗಿಸಿ ಅದರಿಂದ ಗಾಜನ್ನು ಸೃಷ್ಟಿ ಮಾಡಿ ಅದರಿಂದ
ಸೂಕ್ಷ್ಮದರ್ಶಕ, ದೂರದರ್ಶಕಗಳನ್ನು ತಯಾರಿಸಿ ಅವುಗಳ ಮೂಲಕ ಜಗತ್ತನ್ನು ನೋಡುತ್ತೇವೆ,
ನಿಯಂತ್ರಿಸುತ್ತೇವೆ. ಗಾಳಿಯನ್ನು ನಮಗೆ ಬೇಕೆಂದಾಗ ಸೃಷ್ಟಿಸಿ ಬೇಕಾದ ದಿಕ್ಕಿಗೆ ತಿರುಗಿಸಿ
ವಿಮಾನಗಳನ್ನು ಓಡಿಸುತ್ತೇವೆ. ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತೇವೆ, ಯಂತ್ರಗಳನ್ನು
ನಡೆಸುತ್ತೇವೆ. ನಮ್ಮ ಬದುಕಿಗೆ ಅಪಾಯ ತರಬಹುದಾದ ಎಲ್ಲ ಅನಿಷ್ಟಗಳನ್ನೂ ದೂರ ಮಾಡುತ್ತೇವೆ.
ನಮ್ಮ ಎಲ್ಲ ದೈಹಿಕ ದೌರ್ಬಲ್ಯಗಳನ್ನೂ ಮೆಟ್ಟಿ ನಾವು ಅತ್ಯಂತ ಪ್ರಬಲ ಜೀವಿಯಾಗಿದ್ದೇವೆ.
ಅವೆಲ್ಲ ವಿಜ್ಞಾನದ ಮೂಲಕ ನಮಗೆ ಲಭಿಸಿದ ವರದಾನವಾಗಿದೆ.
ಆದರೂ ನಮಗೆ ವಿಜ್ಞಾನವೆಂದರೆ ತೀರ ಅರ್ಥವಾಗದ ವಿದ್ಯೆ, ತೀರ ಕ್ಲಿಷ್ಟ ವಿಷಯ ಎಂಬ ಭಾವನೆ
ಇದೆ. ಅದು ನಮಗೆ ಸಂಬಂಧಿಸಿದ್ದೇ ಅಲ್ಲ ಎಂಬಂತೆ ಅದರಿಂದ ಆದಷ್ಟೂ ದೂರ ಇರಲು
ಯತ್ನಿಸುತ್ತೇವೆ. ಮಕ್ಕಳ ಪಾಠಗಳಲ್ಲಿ ವಿಜ್ಞಾನದ ವಿಷಯ ಬಂದಾಗ ಹೇಗೋ ಚಡಪಡಿಸುತ್ತ, ಅವರು
ಕೇಳುವ ಪ್ರಶ್ನೆಗಳಿಗೆ ಏನೋ ತೋಚಿದ ಉತ್ತರ ಹೇಳಿ ಜಾರಿಕೊಳ್ಳುತ್ತೇವೆ.
ವಿಜ್ಞಾನ ಬೆಳೆದಿದ್ದೇ ಪ್ರಶ್ನೆಗಳನ್ನು ಕೇಳುವುದರಿಂದ. ಹಾಗೂ ಪ್ರಶ್ನೆಗಳಿಗೆ ಸರಿಯಾದ
ಉತ್ತರ ಹುಡುಕುವುದರಿಂದ.
ದೋಸೆಯಲ್ಲಿ ಏಕೆ ತೂತುಗಳಾಗುತ್ತವೆ? ಹುಳಿ ಬಂದ ಮೊಸರಿನಿಂದ ಏಕೆ ಗುಳ್ಳೆಗಳು ಹೊರಕ್ಕೆ
ಬರುತ್ತವೆ? ನಂದಿನಿ ಮೊಸರಿನ ಪ್ಯಾಕೆಟ್ಟು ಯಾಕೆ ಕೆಲವೊಮ್ಮೆ ಉಬ್ಬಿಕೊಳ್ಳುತ್ತದೆ? ಈ
ಪ್ರಶ್ನೆಗಳು ತಲೆಯಲ್ಲಿ ಹೊಕ್ಕರೆ, ಅದಕ್ಕೆ ಉತ್ತರ ಸಿಗುವವರೆಗೆ ಆ ಪ್ರಶ್ನೆ ನಮ್ಮನ್ನು
ಕಾಡುತ್ತಿದ್ದರೆ, ಅದರಿಂದ ವಿಜ್ಞಾನ ಹೊಮ್ಮುತ್ತದೆ.
ಇಂಥ ಸರಳ ಪ್ರಶ್ನೆಗಳ ಹಿಂದೆ ಬಹುದೊಡ್ಡ ವೈಜ್ಞಾನಿಕ ಸತ್ಯಗಳು ಅಡಗಿರುತ್ತವೆ. ಹಿಂದೆ
ಆಗಿಹೋದ ಮಹಾನ್ ವಿಜ್ಞಾನಿಗಳೆಲ್ಲ ಛಲ ಬಿಡದೆ ಇಂಥ ಸರಳ ಪ್ರಶ್ನೆಗಳ ಬೆನ್ನಟ್ಟಿ ಪ್ರಕೃತಿಯ
ಮಹಾನ್ ಸತ್ಯಗಳನ್ನು ಪತ್ತೆ ಹಚ್ಚಿದ್ದಾರೆ. ನಮ್ಮ ಸರ್ ಸಿವಿ ರಾಮನ್ ಅವರು ತಮಗೆ ತಾವೇ
ಕೇಳಿಕೊಂಡ ಸರಳ ಪ್ರಶ್ನೆ ಏನಿತ್ತು ಗೊತ್ತೆ? ‘ಆಕಾಶ ಏಕೆ ನೀಲಿ?’ ನೀಲಿ ಇದೆ ಅನ್ನೋದು
ಎಲ್ಲರಿಗೂ ಗೊತ್ತಿತ್ತು. ಆದರೆ ಅದು ಯಾಕೆ ನೀಲಿ ಇದೆ ಎಂದು ಯಾರೂ ಪ್ರಶ್ನಿಸುವ ಗೋಜಿಗೆ
ಹೋಗಿರಲಿಲ್ಲ. ಕೆಲವರ ತಲೆಯಲ್ಲಿ ಆ ಪ್ರಶ್ನೆ ಹುಟ್ಟಿತ್ತೇನೊ. ಆದರೆ ಛಲಕ್ಕೆ ಬಿದ್ದಂತೆ
ಅದಕ್ಕೆ ಉತ್ತರ ಹುಡುಕಲು ಯತ್ನಿಸಲಿಲ್ಲ. ನಿಸರ್ಗದ ಬಹಳಷ್ಟು ಕ್ರಿಯೆಗಳೆಲ್ಲ ನಮ್ಮಲ್ಲಿ
ಪ್ರಶ್ನೆಗಳನ್ನೇ ಸೃಷ್ಟಿಸುವುದಿಲ್ಲ. ತೆಂಗಿನ ಮರದಿಂದ ಕಾಯಿ ಕೆಳಕ್ಕೆ ಬಿದ್ದರೆ ‘ಯಾಕೆ
ಬಿತ್ತು?’ ಅಂತ ನಾವು ಎಂದೂ ತಲೆ ಕೆಡಿಸಿಕೊಳ್ಳುವುದಿಲ್ಲ. ಐಸಾಕ್ ನ್ಯೂಟನ್ ಅಂಥ ಒಂದು
ಪ್ರಶ್ನೆಯನ್ನು ತನಗೆ ತಾನೇ ಕೇಳಿಕೊಂಡು ಅದಕ್ಕೆ ಉತ್ತರ ಹುಡುಕುತ್ತ ಹೋಗಿದ್ದರಿಂದಲೇ
ಶ್ರೇಷ್ಠ ವಿಜ್ಞಾನಿ ಅನ್ನಿಸಿಕೊಂಡ.
ಪುಟ್ಟ ಮಕ್ಕಳು ಅಂಥ ನೂರಾರು ಪ್ರಶ್ನೆಗಳನ್ನು ಕೇಳುತ್ತಿರುತ್ತವೆ. ಉತ್ತರ ನಮಗೂ
ಸ್ಪಷ್ಟವಾಗಿ ಗೊತ್ತಿರುವುದಿಲ್ಲ ಅಥವಾ ಉತ್ತರಿಸುವ ತಾಳ್ಮೆಯೇ ನಮಗೆ ಇರುವುದಿಲ್ಲ. ಈಗಿನ
ದಿನಗಳಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳು ಸುಲಭವಾಗಿ ಸಿಗುತ್ತವೆ. ಈಗಂತೂ ನಿಮ್ಮ
ಸ್ಮಾರ್ಟ್ ಫೋನ್‍ನಲ್ಲೇ ಒಂದೆರಡು ನಿಮಿಷಗಳಲ್ಲಿ ಉತ್ತರಗಳನ್ನು ಪತ್ತೆ ಹಚ್ಚಬಹುದು. ತುಸು
ತಾಳ್ಮೆ ವಹಿಸಿ ಉತ್ತರ ಹುಡುಕಿ ಮಕ್ಕಳ ಕುತೂಹಲ ತಣಿಸಲು ಯತ್ನಿಸಿದರೆ ಮಗುವಿನ ಶೋಧಬುದ್ಧಿಗೆ
ಸಾಣೆ ಹಿಡಿದಂತಾಗುತ್ತದೆ; ಮಿದುಳು ಚುರುಕಾಗುತ್ತದೆ. ತರ್ಕಶಕ್ತಿ ಹೆಚ್ಚುತ್ತದೆ.
ಅಂಗಿ ತೊಟ್ಟ ನಂತರ ನಾವು ಬಟನ್ ಹಾಕುತ್ತೇವೆ. ಅಂದರೆ ವೃತ್ತಾಕಾರದ ಬಟನ್ನನ್ನು ಒಂದು
ಸೀಳುರಂಧ್ರದ ಮೂಲಕ ಅಡ್ಡಡ್ಡ ತೂರಿ ನಂತರ ಅದನ್ನು ಬಟನ್ನಿನ ಮುಖ ತಿರುಗಿಸುತ್ತೇವೆ. ಅಂಗಿ,
ಚಡ್ಡಿ, ಬ್ಲೌಸ್, ಬ್ಯಾಗ್ ಮುಂತಾದವುಗಳ ಎರಡು ಭಾಗವನ್ನು ಜೋಡಿಸುವ ಅತ್ಯಂತ ಸರಳ ವಿಧಾನ
ಅದು. ಆದರೆ ಅದರ ಹಿಂದಿನ ಚಮತ್ಕಾರವನ್ನು ನಾವು ಗಮನಿಸಿದ್ದೇವೆಯೆ? ಮನುಷ್ಯ ಬಟ್ಟೆ ತೊಡಲು
ಆರಂಭಿಸಿ ಐದು ಸಾವಿರ ವರ್ಷಗಳಾದರೂ ಅಂಥ ಉಪಾಯ ಯಾರಿಗೂ ಹೊಳೆದಿರಲಿಲ್ಲ. ನಮ್ಮ ದೇಶದಲ್ಲಂತೂ
1930ರವರೆಗೂ ಅಂಗಿಗೆ ಅಂಥ ಬಟನ್ ಇರಲೇ ಇಲ್ಲ. ಬಹುಶಃ ಅದೇ ಕಾರಣಕ್ಕೆ ಇರಬೇಕು, ಮಹಿಳೆಯರಿಗೆ
ರವಿಕೆಯೇ ಇರಲಿಲ್ಲ. ಯುರೋಪಿನ ಜನರು ನಮ್ಮಲ್ಲಿಗೆ ಬಂದ ನಂತರವೇ ನಮಗೆ ಬಟನ್ ಪರಿಚಯ ಆದದ್ದು.
ಸಣ್ಣ ಸಣ್ಣ ಸಂಶೋಧನೆಗಳು ಇಡೀ ಮಾನವಕುಲದ ಬದುಕನ್ನೇ ಬದಲಾಯಿಸುತ್ತವೆ ನೋಡಿ.
ಹೊಲಿಗೆ ಯಂತ್ರ ಅಸ್ತಿತ್ವಕ್ಕೆ ಬರಲು ಬಹುಮುಖ್ಯ ಕಾರಣ ಏನು ಗೊತ್ತೆ? ಸೂಜಿಯ ಚೂಪು
ತುದಿಯಲ್ಲೇ ರಂಧ್ರ ಮಾಡಬೇಕು ಎಂಬ ಆಲೋಚನೆ ಈಲಿಯಾಸ್ ಹೋವ್ ಎಂಬಾತನಿಗೆ ಹೊಳೆಯಿತು.
ಅದುವರೆಗೆ ಎಷ್ಟೆಲ್ಲ ಬಗೆಯ ಯಂತ್ರಗಳನ್ನು ತಯಾರಿಸಿ ಎಲ್ಲರೂ ವಿಫಲ ಆಗಿದ್ದರು. ಸೂಜಿಯ ಒಂದು
ಕಣ್ಣಿನ ಮೂಲಕ ಜಗತ್ತೇ ಬದಲಾಯಿತು.
ವೆಲ್‍ಕ್ರೋ ಝಿಪ್ ಅಂದರೆ ನಮಗೆಲ್ಲ ಗೊತ್ತೇ ಇದೆ. ಚೀಲದ ಬಾಯಿಯನ್ನು, ಬೂಟಿನ ಬೆಲ್ಟನ್ನು,
ಪಾಕೀಟನ್ನು ಪರ್ ಎಂದು ಎಳೆದು ಬಿಚ್ಚುವ ಅಥವಾ ಬಂದ್ ಮಾಡುವ ಸರಳ ಸಾಧನ. ಅದು 1970ರವರೆಗೆ
ಯಾರಿಗೂ ಗೊತ್ತೇ ಇರಲಿಲ್ಲ.
ಜಾರ್ಜ್ ಡಿ ಮೆಸ್ಟ್ರಲ್ ಎಂಬ ಇಲೆಕ್ಟ್ರಾನಿಕ್ ಎಂಜಿನಿಯರ್ ಅಲ್ಲೆಲ್ಲೋ ಸ್ವಿಸ್ ಪರ್ವತ
ಏರುತ್ತಿದ್ದಾಗ ಅವನ ಬಟ್ಟೆಗೆ ಹಾಗೂ ಅವನೊಂದಿಗಿದ್ದ ನಾಯಿಯ ಮೈಗೆಲ್ಲ ಮುಳ್ಳುಮುಳ್ಳಿನ
ಬೀಜಗಳು ಅಂಟಿಕೊಂಡಿದ್ದವು. ಅದು ಹೇಗೆ ಅಂಟಿದೆ ಎಂದು ಸೂಕ್ಷ್ಮವಾಗಿ ನೋಡುತ್ತಿದ್ದಾಗ ಉತ್ತರ
ಹೊಳೆಯಿತು: ಬೀಜದ ಮೇಲಿರುವ ಕೊಕ್ಕೆಯಂಥ ಮುಳ್ಳುಗಳು ಈತನ ಬಟ್ಟೆಯ ನವಿರು ದಾರಕ್ಕೆ
ಸಿಲುಕಿಕೊಳ್ಳುತ್ತಿದ್ದವು. ಈತ ಮನೆಗೆ ಬಂದವನೇ ತಾನೂ ಮಿದು ಪ್ಲಾಸ್ಟಿಕ್‍ನಿಂದ ಅಂಥದ್ದೇ
ಕೊಕ್ಕೆಗಳನ್ನು ತಯಾರಿಸಿದ. ಬಟ್ಟೆಯ ನೇಯ್ಗೆಗೆ ಅದು ಸಿಲುಕಿಕೊಳ್ಳುವುದನ್ನು ನೋಡಿದ.
ಅಂಥದ್ದೇ ನೇಯ್ಗೆ ಇರುವ ಪ್ಲಾಸ್ಟಿಕ್ ಮತ್ತು ಕೊಕ್ಕೆಗಳನ್ನು ತಯಾರಿಸಿದ. ಇಪ್ಪತ್ತು ವರ್ಷಗಳ
ಸತತ ಪರಿಶ್ರಮದಿಂದ ರೂಪಿಸಿದ ಝಿಪ್ ಸಾಧನ ಇಂದು ಎಲ್ಲೆಡೆ ಬಳಕೆಯಾಗುತ್ತಿದೆ.
ಪ್ರಶ್ನೆ ಕೇಳುವುದರಿಂದಲೂ ವಿಜ್ಞಾನ ಬೆಳೆಯುತ್ತದೆ. ನಿಸರ್ಗದಲ್ಲಿ ವೈಚಿತ್ರ್ಯಗಳನ್ನು
ಸೂಕ್ಷ್ಮವಾಗಿ ಅಧ್ಯಯನ ಮಾಡಿ ಅದನ್ನೇ ಅನುಕರಿಸುವುದರಿಂದಲೂ ವಿಜ್ಞಾನ ತಂತ್ರಜ್ಞಾನ
ವಿಕಾಸವಾಗುತ್ತದೆ. ಹಸುಗಳಿಗೆ ಸಿಡುಬು ಬಂದರೂ ಅದು ಯಾಕೆ ಹಸುಗಳ ಪ್ರಾಣ ತೆಗೆಯುತ್ತಿಲ್ಲ
ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಎಡ್ವರ್ಡ್ ಜೆನ್ನರ್ ಎಂಬಾತ ಸಿಡುಬಿನ ಲಸಿಕೆಯನ್ನು
ಕಂಡು ಹಿಡಿದ. ಅಕ್ಷರಶಃ ಕೋಟಿಗಟ್ಟಲೆ ಜನರ ಪ್ರಾಣ ಉಳಿಸಿದ. ಅದೇ ರೀತಿ ಅಲೆಕ್ಸಾಂಡರ್
ಫ್ಲೆಮಿಂಗ್ ಎಂಬಾತ ‘ಪೆನಿಸಿಲಿನ್’ ಎಂಬ ಆಂಟಿ ಬಯಾಟಿಕ್ (ಜೀವಿರೋಧಕ ಅಥವಾ ಪ್ರತಿಜೈವಿಕ)
ಔಷಧವನ್ನು ಆಕಸ್ಮಿಕವಾಗಿ ಪತ್ತೆ ಮಾಡಿದ್ದಕ್ಕೂ ಇಂಥದ್ದೇ ರೋಚಕ ಕತೆಯಿದೆ. ಕಣ್ಣಿಗೆ
ಕಂಡದ್ದನ್ನು ಮತ್ತಷ್ಟು ಸೂಕ್ಷ್ಮವಾಗಿ ನೋಡುವ ಕಾಳಜಿ, ಕುತೂಹಲ ಇದ್ದರೆ ಅದೇ ವೈಜ್ಞಾನಿಕ
ಅನ್ವೇಷಣೆ ಎನ್ನಿಸಿಕೊಳ್ಳುತ್ತದೆ.
ಅಂಥ ವೈಜ್ಞಾನಿಕ ಮನೋವೃತ್ತಿಯನ್ನು ನಾವೆಲ್ಲ ಬೆಳೆಸಿಕೊಳ್ಳಬೇಕು ಎಂಬುದನ್ನು
ಪ್ರಚುರಗೊಳಿಸಲೆಂದೇ ಫೆಬ್ರುವರಿ 28ನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನು ಹಬ್ಬದಂತೆ
ಆಚರಿಸಲಾಗುತ್ತದೆ. ಶಾಲೆಗಳಲ್ಲಿ, ವೈಜ್ಞಾನಿಕ ಸಂಘ ಸಂಸ್ಥೆಗಳಲ್ಲಿ ಹಾಗೂ
ಲ್ಯಾಬೊರೇಟರಿಗಳಲ್ಲಿ ಅದ್ದೂರಿಯಾಗಿ ಆಚರಿಸುತ್ತಾರೆ. ತಜ್ಞರು ಭಾಷಣ ಮಾಡುತ್ತಾರೆ;
ಮಕ್ಕಳಿಗೆ ಪ್ರಯೋಗಶಾಲೆಗಳನ್ನು ತೋರಿಸುತ್ತಾರೆ. ದೂರದರ್ಶಕದ ಮೂಲಕ ಗ್ರಹ ತಾರೆಗಳ ವೀಕ್ಷಣೆ
ಮಾಡಿಸುತ್ತಾರೆ.
ಅವೆಲ್ಲ ಸರಿ. ಆದರೆ ಜನಸಾಮಾನ್ಯರು ಮಾತ್ರ ಈ ವಿಜ್ಞಾನ ಹಬ್ಬದಿಂದ ದೂರವೇ ಉಳಿಯುತ್ತಾರೆ.
ಹಾಗೆ ನೋಡಿದರೆ, ಶಾಲೆ ಕಾಲೇಜು, ಪ್ರಯೋಗಶಾಲೆಗಳಿಗಿಂತ ಇಂದು ವೈಜ್ಞಾನಿಕ ಮನೋಭಾವವನ್ನು
ಸಾಮಾನ್ಯ ಜನರಲ್ಲಿ ಬಿತ್ತಬೇಕಾದ ಅಗತ್ಯವಿದೆ. ಏಕೆಂದರೆ ನಾನಾ ಬಗೆಯ ಅವೈಜ್ಞಾನಿಕ
ಮೂಢನಂಬಿಕೆಗಳಿಗೆ ಕಟ್ಟುಬಿದ್ದು ಜನರು ಜೀವನದಲ್ಲಿ ಏನೆಲ್ಲ ಕಷ್ಟನಷ್ಟ
ಅನುಭವಿಸುತ್ತಿರುತ್ತಾರೆ. ಈಗಲೂ ನಿಧಿ ಶೋಧಕ್ಕೆಂದು ನರಬಲಿ ಕೊಡುವ ಮೂಢರ ಬಗ್ಗೆ ನಮ್ಮ
ದೇಶದಲ್ಲಿ ಆಗಾಗ ವರದಿಗಳು ಬರುತ್ತಲೇ ಇರುತ್ತವೆ. ರಸ್ತೆಬದಿಯಲ್ಲಿ ಗಿಣಿಶಾಸ್ತ್ರ ಹೇಳುವ,
ನೋವಿನ ತೈಲ ಮಾರುವ ಢೋಂಗಿಗಳು ಕಂಡುಬರುತ್ತಾರೆ. ರೋಗರುಜಿನೆ ಬಂದಾಗ ಇಲ್ಲವೆ ಹಾವು-ಚೇಳು
ಕಚ್ಚಿದಾಗ ಡಾಕ್ಟರಿಗೆ ತೋರಿಸುವ ಬದಲು ಬಾಬಾಗಳನ್ನೊ, ಮಂತ್ರವಾದಿಗಳನ್ನೊ, ತೀರ್ಥ ಪ್ರಸಾದ,
ಹರಕೆಗಳನ್ನೊ ನಂಬಿ ಮೋಸ ಹೋಗುತ್ತಿರುತ್ತಾರೆ. ವಿಜ್ಞಾನದ ದೃಷ್ಟಿಯಿಂದ ಸತ್ಯದೂರವಾದ ಬೂದಿ,
ತಾಯತ, ಹರಳು, ಉಂಗುರ, ತೈಲ, ರುದ್ರಾಕ್ಷಿ, ವಾಸ್ತು, ರಾಹು, ಕೇತು ಮುಂತಾದ ನಾನಾ ಬಗೆಯ
ಮಂಕುಬೂದಿಗಳಿಗೆ ಮುಗ್ಧರು ಬಲಿಪಶುವಾಗುತ್ತಾರೆ.
ಅಂಥವರಲ್ಲಿ ವೈಚಾರಿಕ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ
‘ರಾಷ್ಟ್ರೀಯ ವಿಜ್ಞಾನ ದಿನ’ದ ಆದ್ಯತೆ ಬದಲಾಗಬೇಕು. ನಾವೆಲ್ಲರೂ ಏನು ವಿಜ್ಞಾನಿಗಳೇ
ಆಗಬೇಕೆಂದಿಲ್ಲ. ಯಾವುದು ವೈಜ್ಞಾನಿಕ ಯಾವುದು ಅವೈಜ್ಞಾನಿಕ ಆಚರಣೆ ಎಂಬುದನ್ನು
ಪ್ರತ್ಯೇಕಿಸಿ ನೋಡುವ ಸಾಮಥ್ರ್ಯ ಬಂದರೆ ಅದೇ ಸಾಕು. ಈ 21ನೇ ಶತಮಾನದಲ್ಲೂ 18ನೇ ಶತಮಾನದ
ಮೂಢನಂಬಿಕೆಗಳಿಗೆ, ರೂಢ ನಂಬಿಕೆಗಳಿಗೆ ಜೋತು ಬಿದ್ದ ಕೋಟ್ಯಂತರ ಜನರು ನಮ್ಮಲ್ಲಿದ್ದಾರೆ.
ಅಂಥವರನ್ನು ವಿಚಾರವಂತರನ್ನಾಗಿಸುವ ಕೆಲಸಕ್ಕೆ ಈ ‘ಹಬ್ಬ’ದ ದಿನವೇ ಚಾಲನೆ ಸಿಗುವಂತಾಗಬೇಕು.
ಇಲ್ಲಾಂದರೆ ವಾಸ್ತವ ಏನೆಂದು ಗೊತ್ತಲ್ಲ, ಎರಡನೆಯ ನೊಬೆಲ್‍ಗೇ ನಮ್ಮಲ್ಲಿ ತತ್ವಾರ ಇದೆ. ಸರ್
ಸಿವಿ ರಾಮನ್ನರಿಗೆ ನಮ್ಮ ದೇಶದ ಮೊದಲ ವಿಜ್ಞಾನ ನೊಬೆಲ್ ಸಿಕ್ಕಿತು ನಿಜ. ಆದರೆ ಅವರ ನಂತರ
ಭಾರತದಲ್ಲಿ ಸಂಶೋಧನೆ ಮಾಡಿದ ಯಾವ ಭಾರತೀಯ ವಿಜ್ಞಾನಿಗೂ ಇನ್ನೊಂದು ನೊಬೆಲ್ ಇದುವರೆಗೆ
ಸಿಗಲಿಲ್ಲ

<http://www.blogger.com/blog_this.pyra?t&u=http%3A%2F%2Fkanaja.in%2Farchives%2F127928&n=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95+%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF&pli=1>
<http://delicious.com/post?url=http%3A%2F%2Fkanaja.in%2Farchives%2F127928&title=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95+%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF>
<http://digg.com/submit?url=http%3A%2F%2Fkanaja.in%2Farchives%2F127928&title=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95+%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF&bodytext=%E0%B2%AA%E0%B3%8D%E0%B2%B0%E0%B2%A4%E0%B2%BF+%E0%B2%B5%E0%B2%B0%E0%B3%8D%E0%B2%B7+%E0%B2%AB%E0%B3%86%E0%B2%AC%E0%B3%8D%E0%B2%B0%E0%B3%81%E0%B2%B5%E0%B2%B0%E0%B2%BF+28%E0%B2%B0%E0%B2%82%E0%B2%A6%E0%B3%81+%E0%B2%A8%E0%B2%BE%E0%B2%B5%E0%B3%81+%E0%B2%AD%E0%B2%BE%E0%B2%B0%E0%B2%A4%E0%B3%80%E0%B2%AF%E0%B2%B0%E0%B3%81+%E2%80%98%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8%E2%80%99%E0%B2%B5%E0%B2%A8%E0%B3%8D%E0%B2%A8%E0%B3%81+%E0%B2%86%E0%B2%9A%E0%B2%B0%E0%B2%BF%E0%B2%B8%E0%B3%81%E0%B2%A4%E0%B3%8D%E0%B2%A4%E0%B3%87%E0%B2%B5%E0%B3%86.+%E0%B2%8F%E0%B2%95%E0%B3%86%E0%B2%82%E0%B2%A6%E0%B2%B0%E0%B3%86+%E0%B2%AB%E0%B3%86%E0%B2%AC%E0%B3%8D%E0%B2%B0%E0%B3%81%E0%B2%B5%E0%B2%B0%E0%B2%BF+28+%E0%B2%85%E0%B2%A8%E0%B3%8D%E0%B2%A8%E0%B3%8B%E0%B2%A6%E0%B3%81+%E2%80%98%E0%B2%B0%E0%B2%BE%E0%B2%AE%E0%B2%A8%E0%B3%8D+%E0%B2%8E%E0%B2%AB%E0%B3%86%E0%B2%95%E0%B3%8D%E0%B2%9F%E0%B3%8D%27+%E0%B2>
<http://www.facebook.com/sharer.php?u=http%3A%2F%2Fkanaja.in%2Farchives%2F127928&t=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95+%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF>
<http://www.reddit.com/submit?url=http%3A%2F%2Fkanaja.in%2Farchives%2F127928&title=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95+%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF>
<http://www.stumbleupon.com/submit?url=http%3A%2F%2Fkanaja.in%2Farchives%2F127928&title=%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8+%E0%B2%A6%E0%B2%BF%E0%B2%A8+%E0%B2%AE%E0%B2%A4%E0%B3%8D%E0%B2%A4%E0%B3%81+%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95+%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF>
<http://twitter.com/home/?status=http%3A%2F%2Fkanaja.in%2Farchives%2F127928>
<javascript:window.print();>
<?subject=%E0%B2%95%E0%B2%A3%E0%B2%9C%20:%20%E0%B2%B5%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8%20%E0%B2%A6%E0%B2%BF%E0%B2%A8%20%E0%B2%AE%E0%B2%A4%E0%B3%8D%E0%B2%A4%E0%B3%81%20%E0%B2%B5%E0%B3%88%E0%B2%9C%E0%B3%8D%E0%B2%9E%E0%B2%BE%E0%B2%A8%E0%B2%BF%E0%B2%95%20%E0%B2%AE%E0%B2%A8%E0%B3%8B%E0%B2%B5%E0%B3%83%E0%B2%A4%E0%B3%8D%E0%B2%A4%E0%B2%BF&body=here%20is%20a%20link%20to%20a%20site%20I%20really%20like.%20%20%20https://kanaja.in/archives/127928>

*ಲೇಖಕರು:* ನಾಗೇಶ ಹೆಗಡೆ
<http://kanaja.in/archives/author/%e0%b2%a8%e0%b2%be%e0%b2%97%e0%b3%87%e0%b2%b6-%e0%b2%b9%e0%b3%86%e0%b2%97%e0%b2%a1%e0%b3%86>

Hareeshkumar K
AM(PCM)
GHS HUSKURU
MALAVALLI TQ
MANDYA DT 571475
mobile no 9880328224
email harihusk...@gmail.com

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to