http://m.vijaykarnataka.com/edit-oped/columns/net-nota-by-sudheendra-haldodderi/articleshow/54310758.cms

*ನೆಟ್‌ ನೋಟ: ವಿಮಾನದ ಜಿಜಿ ಪದದಿಂದ ಜೋಜೋ ಲಾಲಿಗೆ ಭಂಗ!*

Sep 14, 2016, 04.00 AM IST

Whatsapp <javascript:void(0);>Facebook <javascript:void(0);>Google Plus
<javascript:void(0);>Twitter <javascript:void(0);>Email
<javascript:void(0);>SMS <javascript:void(0);>

war-flight

AAA

* ಸುಧೀಂದ್ರ ಹಾಲ್ದೊಡ್ಡೇರಿ ಮೊನ್ನೆ ಸೋಮವಾರ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ
ಅಚಾನಕ್ಕಾಗಿ ಕಣ್ಣಿಗೆ ಬಿದ್ದವರು ಕನ್ನಡ ಪ್ರಾಧ್ಯಾಪಕರಾದ ನಮ್ಮ ಎಂ.ಕೃಷ್ಣೇಗೌಡರು. ವಿಮಾನ
ತಡವಾಗಿ ಹೊರಡಲಿದೆಯೆಂಬ ಸುದ್ದಿ ಬಂದೊಡನೆ ಮಾತು ಸುಗ್ಗಿಯ ಸುರಿಮಳೆಯಂತಾಯಿತು. ''ಕಳೆದ
ಬಾರಿಯ ಪಯಣದಲ್ಲಿ ಟರ್ಬು್ಯಲೆನ್ಸಿಗೆ ಸಿಕ್ಕ ವಿಮಾನ ತೂರಾಡ್ತು. ಸಹ ಪಯಣಿಗರನೇಕರು
ಕಿರಿಚಿಕೊಂಡ್ರು. ಈ ಟರ್ಬು್ಯಲೆನ್ಸ್‌ ಹೇಗಾಗತ್ತೆ, ಅದನ್ನು ವಿಮಾನಗಳು ಹೆಂಗೆ
ತಡೆದುಕೊಳ್ಳತ್ವೆ' ಎಂಬ ಪ್ರಶ್ನೆಗಳೊಂದಿಗೆ ನಮ್ಮಿಬ್ಬರ ಮಾತುಕತೆ ವಿಮಾನದ ಸುತ್ತ ಗಿರಕಿ
ಹೊಡೆಯತೊಡಗಿತು. 'ವಾಯುಚಲನೆ ಸಪೂರವಾಗಿದ್ದಲ್ಲಿ ವಿಮಾನ ಪಯಣ ಎಷ್ಟು ಹಿತಕರವಾಗಿರುತ್ತದೋ,
ಅದು ಕ್ಷೋಭೆಗೊಳಗಾದಾಗ ಅಸಹನೀಯವೆನಿಸುತ್ತದೆ. ಆಗಸದಲ್ಲಿ ಚಿತ್ತಾರಗಳನ್ನೆಬ್ಬಿಸುತ್ತಾ,
ಕಣ್ಮುಚ್ಚಿ ಬಿಡುವಷ್ಟರಲ್ಲಿ ಜಿಗಿದಿಳಿಯುವ ಯುದ್ಧ ವಿಮಾನಗಳಲ್ಲಿ ಸಾಮಾನ್ಯ ವಿಮಾನ ಪಯಣಿಗರು
ಕಲ್ಪಿಸಿಕೊಳ್ಳಲೂ ಆಗದಂಥ ಗಿರಗಿಟ್ಟಲೆಯಿರುತ್ತದೆ. ವಾತಾವರಣದಲ್ಲಿ ದಿಢೀರನೆ ಬದಲಾಗುವ
ಒತ್ತಡ, ಬೀಸುಗಾಳಿ, ತಾಪಮಾನ ಕುಸಿತಗಳು ವಾಯುಚಲನೆಯ ಕ್ಷೋಭೆಯನ್ನು ಹೆಚ್ಚಿಸುತ್ತವೆ,''
ಎಂದೆ. ಯುದ್ಧ ವಿಮಾನಗಳಲ್ಲಿ ಹಾರಾಟ ನಡೆಸುವುದೆಂದರೆ ತಮಾಷೆಯ ಮಾತಲ್ಲ. ಅಸಲಿಗೆ ನಮ್ಮ ದೇಹ
ಊಹೆಗೂ ನಿಲುಕದ ಒತ್ತಡಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ಅಲ್ಲಿನ ಅನುಭವಗಳು
ಎಂಥದಿರಬಹುದು? ಮೋಜಿಗೆಂದು ನೀವೆಂದಾದರೂ ದೊಡ್ಡ 'ಜಯಂಟ್‌ ವೀಲ್‌'ನಲ್ಲಿ
ಕುಳಿತುಕೊಂಡಿದ್ದರೆ ವಿಶಿಷ್ಟ ಅನುಭವವೊಂದು ನಿಮಗಾಗಿರುತ್ತದೆ. ವೇಗವಾಗಿ ಮೇಲೇರಿ,
ಕೆಳಗಿಳಿಯುತ್ತಿದ್ದರೆ ಒಮ್ಮೆ ನಿಮ್ಮ ದೇಹ 'ತೂಕ ರಹಿತ'ವಾದಂತೆ, ಮಗದೊಮ್ಮೆ 'ತೂಕ
ಹೆಚ್ಚಾದ'ಂತೆ ಅನ್ನಿಸಿರುತ್ತದೆ. ಇಂಥದೇ ಅನುಭವಗಳು ವೇಗದಿಂದ ಕೆಳಗಿಳಿಯುವ
'ಲಿಫ್ಟ್‌'ಗಳಲ್ಲಿ ಪಯಣಿಸುವಾಗ, ಇಲ್ಲವೇ ಮೋಜಿನ 'ವಾಟರ್‌ ಪಾರ್ಕ್‌'ಗಳಲ್ಲಿ ಮೇಲೆ ಕೆಳಗೆ
ತೂಯ್ದಾಡುವಾಗ, ತಿರುಗಣೆಯಲ್ಲಿ ವೇಗವಾಗಿ ಸುತ್ತುವಾಗಲೂ ಹೃದಯ ಬಾಯಿಗೆ ಬಂದಂತಾಗಿರುತ್ತದೆ.
ಇದೆಲ್ಲ 'ಭೂಮಿಯ ಗುರುತ್ವಾಕರ್ಷಣೆ'ಯ ಕರಾಮತ್ತು. ನಾವಿಂದು ಭೂಮಿಯ ಮೇಲೆ ಭದ್ರವಾಗಿ ಕಾಲೂರಿ
ನಿಲ್ಲಲು ಸಾಧ್ಯವಾಗಿರುವುದು ಈ ಸೆಳೆತದಿಂದಲೇ. ಮೇಲೆಸೆದ ಚೆಂಡೊಂದು ಕೆಳಗೆ ಬೀಳಲು ಇದೇ
ಗುರುತ್ವ ಕಾರಣ. ವೇಗವೆಂದರೆ ನಿಮಗೆ ಗೊತ್ತು. ನಿರ್ದಿಷ್ಟ ಸಮಯದಲ್ಲಿ ವಸ್ತುವೊಂದು ಎಷ್ಟು
ದೂರ ಕ್ರಮಿಸಿದೆಯೆಂದು ಅಳೆಯುವ ಮಾಪನ. ಈ ವೇಗ ಏರುತ್ತಲೋ ಅಥವಾ ಇಳಿಯತ್ತಲೋ ಹೋಗಬಹುದು. ಭೌತ
ವಿಜ್ಞಾನದಲ್ಲಿ ಈ ವೇಗ ಬದಲಾವಣೆಯ ದರವನ್ನು 'ವೇಗೋತ್ಕರ್ಷ' ಎಂದು ಗುರುತಿಸಲಾಗಿದೆ.
ಉದಾಹರಣೆಗೆ ನಮ್ಮ ಭೂಮಿಯ ಗುರುತ್ವ ಸೆಳೆತದ ವೇಗೋತ್ಕರ್ಷ ಪ್ರತಿ ಸೆಕೆಂಡ್‌-ಸೆಕೆಂಡ್‌ಗೆ
ಸುಮಾರು 981 ಸೆಂಟಿಮೀಟರ್‌. ಅಂದರೆ ಪ್ರತಿ ಸೆಕೆಂಡ್‌ಗೆ ಭೂಮಿಯತ್ತ ಸೆಳೆಯುವ ವೇಗ
ಸೆಕೆಂಡ್‌ಗೆ 981 ಸೆಂಟಿಮೀಟರ್‌ನಷ್ಟು ಹೆಚ್ಚಾಗುತ್ತದೆ. ಕೆಳಗೆ ಬೀಳುತ್ತಿರುವ ವಸ್ತುವೊಂದು
ಭೂಮಿಯನ್ನು ಸಮೀಪಿಸುತ್ತಿದ್ದಂತೆ ಪ್ರತಿ ಸೆಕೆಂಡ್‌ಗೂ ಅದರ ವೇಗ ಹೆಚ್ಚಾಗುತ್ತಾ ಹೋಗುವ
ಪರಿಯಿದು. ಇದನ್ನು ಪುಟ್ಟದಾಗಿ 'g' ಎಂದು ಕರೆಯುವ ವಾಡಿಕೆಯಿದೆ. ಸ್ವಲ್ಪ ತಾಳಿ,
ನಿಮ್ಮನ್ನು 'ಜಿ' ವಿಷಯದತ್ತ ಸ್ವಲ್ಪ ವೇಗೋತ್ಕರ್ಷ ಹೆಚ್ಚಿಸುತ್ತಾ ಸೆಳೆಯಲು
ಪ್ರಯತ್ನಿಸುತ್ತಿದ್ದೇನೆ. ಆರಾಮ ಕುರ್ಚಿಯಲ್ಲಿ ಸದ್ಯಕ್ಕೆ ಕುಳಿತಿರುವ ನಿಮ್ಮ ದೇಹವನ್ನು
ಗುರುತ್ವ ಸೆಕೆಂಡ್‌-ಸೆಕೆಂಡ್‌ಗೆ 981 ಸೆಂಟಿಮೀಟರ್‌ನಷ್ಟು ವೇಗೋತ್ಕರ್ಷದಲ್ಲಿ ಸೆಳೆಯುತ್ತಾ
ಇದೆ. ಈಗ ನಿಮ್ಮ ತೂಕ ಎಪ್ಪತ್ತು ಕಿಲೋಗ್ರಾಂ. ಈ ವೇಗೋತ್ಕರ್ಷ ಅರ್ಧ ಅಂದರೆ
ಸೆಕೆಂಡ್‌-ಸೆಕೆಂಡ್‌ಗೆ 490 ಸೆಂಟಿಮೀಟರ್‌ ಆಗಿಬಿಟ್ಟರೆ ನಿಮ್ಮ ತೂಕ ಮೂವತ್ತೈದೇ ಕೇಜಿ.
ಅದು ದುಪ್ಪಟ್ಟಾಗಿಬಿಟ್ಟರೆ ನೀವು ನೂರನಲವತ್ತು ಕೇಜಿ ತೂಗುತ್ತೀರಿ. ವೇಗೋತ್ಕರ್ಷ ಅಂದರೆ
'g' ಹೆಚ್ಚಿದಂತೆಲ್ಲ ನಿಮ್ಮ ತೂಕ ಹೆಚ್ಚುತ್ತಾ ಹೋಗುತ್ತದೆ. ಟೀವಿ ಚಾನೆಲ್‌ನಲ್ಲಿ
ಆಗಿಂದಾಗ್ಗೆ ಯುದ್ಧ ವಿಮಾನಗಳ ಪರಿಚಯ ಮಾಡಿಕೊಡುವ ಕಾರ್ಯಕ್ರಮಗಳು ಬರುತ್ತವೆ. ಹಾಗೆಯೇ
ತಲ್ಲಣಗೊಳಿಸುವ ಯುದ್ಧ ವಿಮಾನಗಳ ವೀಡಿಯೋ ಚಿತ್ರಗಳನ್ನು ಟೀವಿಯ ಅನೇಕ ಇಂಗ್ಲಿಷ್‌
ಚಾನೆಲ್‌ಗಳಲ್ಲಿ ನೋಡಿದ ನೆನಪು ಸಹಾ ನಿಮಗಿರಬಹುದು. ಯುದ್ಧದ ಆ ಕ್ಷಣದಲ್ಲಿ ಯಾರ ವಿಮಾನ
ಚಾಕಚಕ್ಯತೆಯಿಂದ ಅಸ್ತ್ರಗಳನ್ನು ತೂರಿ ಮೇಲುಗೈ ಸಾಧಿಸುವುದೋ ಅವರ ವಿ'ಮಾನ'ದ ಜೊತೆಗೆ
ಚಾಲಕನ ಪ್ರಾಣವೂ ಉಳಿಯಬಲ್ಲದು. ಬೆಂಗಳೂರಿನಲ್ಲಿ ಎರಡು ವರ್ಷಗಳಿಗೊಮ್ಮೆ ಫೆಬ್ರವರಿ ತಿಂಗಳು
ನಡೆಯುವ 'ಏರೋ ಇಂಡಿಯ' ಮೇಳಗಳಲ್ಲಿ ನೀವು ಭಾಗವಹಿಸಿದ್ದರೆ ಯುದ್ಧ ವಿಮಾನಗಳ ಚಮತ್ಕಾರವನ್ನು
ಕಂಡು ಆನಂದಿಸಿರುತ್ತೀರಿ. ಒಂಬತ್ತು 'ಸೂರ್ಯ ಕಿರಣ'ಗಳು ಗಗನದಲ್ಲಿ ಬಿಡಿಸಿದ ವರ್ಣರಂಜಿತ
ಚಿತ್ತಾರಗಳನ್ನು ಕಂಡು ನೀವು ಬೆರಗಾಗಿರಬಹುದು. ಇಂಥ ಅವಕಾಶ ಸಿಕ್ಕಿಲ್ಲದವರು ಟೀವಿಯಲ್ಲೊ,
ಪತ್ರಿಕೆಗಳಲ್ಲೊ ಆ ವಿಮಾನಗಳು ಚೆಲ್ಲಿದ ತ್ರಿವರ್ಣ ಧೂಮ ಸಿಂಚನದಿಂದ ಸಂತಸಗೊಂಡಿರಬಹುದು.
ಪ್ರೇಮಿಗಳಿಗೆಂದೇ ಸೃಷ್ಟಿಸಿದ ಹೃದಯಾಕಾರ, ಅದರೊಳಗೆ ತೂರಿ ಬಂದ ಪ್ರೇಮ ಬಾಣ ...
ವಿಮಾನಗಳು ಇಷ್ಟೆಲ್ಲ ಕಸರತ್ತು ಮಾಡಬಲ್ಲವೆ? ಅದರಲ್ಲೂ ಅಪ್ಪಟ ಸ್ವದೇಶಿ ವಿಮಾನದಲ್ಲಿ ಕುಳಿತ
ನಮ್ಮ ಚಾಲಕರು ಕಣ್ಣು ಮಿಟಕಿಸುವಷ್ಟರಲ್ಲಿ ಇಷ್ಟೆಲ್ಲ ಚಮತ್ಕಾರ ತೋರಿದರೆಂದರೆ? ...
ತಲೆಕೆಳಗಾಗಿ, ಓರೆಯಾಗಿ, ಏರಿದ ಮರುಕ್ಷ ಣದಲ್ಲೇ ಇಳಿಯುತ್ತ, ಯಾವುದೇ ಹಕ್ಕಿಯನ್ನೂ
ನಾಚಿಸುತ್ತಿದ್ದ ಈ ವಿಮಾನಗಳು ನಮ್ಮ ದೇಶದ ರಕ್ಷಣಾ ಪಡೆಯ ಅಚ್ಚುಮೆಚ್ಚಿನ ಹಾರುಯಂತ್ರಗಳು. ಈ
ಕಸರತ್ತು ನಡೆಸುವಾಗ ವಿಮಾನದಲ್ಲಿ ಕುಳಿತ ಚಾಲಕನ ಪಾಡೇನು? ಈ ಪ್ರಶ್ನೆಯನ್ನು ಕ್ಷಣ
ಕ್ಷಣಕ್ಕೆ ಏರುಪೇರಾಗುವ 'g' ಸಾಹೇಬರನ್ನೇ ಕೇಳಬೇಕು. ಧಸಕ್ಕೆಂದು ಎರಡು 'g' ಗಳಷ್ಟು
ವೇಗೋತ್ಕರ್ಷದಲ್ಲಿ ವಿಮಾನ ಮೇಲೇರಿದರೆ ಆ ಕ್ಷ ಣದಲ್ಲಿ ವಿಮಾನ ಮತ್ತದರ ಚಾಲಕ ಅನುಭವಿಸುವ
ಸೆಳೆತ ಎರಡು 'g' ಗಳಷ್ಟು. ಅಂದರೆ ಅವನ ತೂಕ ಏಕಾಏಕಿ ಎರಡರಷ್ಟಾಗಿರುತ್ತದೆ.
ಗಿರಗಿಟ್ಟಲೆಯಂತೆ ವಿಮಾನ ಸುತ್ತುಹಾಕಿದಾಗಲೂ ಇಂಥ ಬಲಪ್ರಯೋಗ ಆತನ ಮೇಲಾಗುತ್ತದೆ. ಈ
ಸಂದರ್ಭದಲ್ಲಿ ಹೆಚ್ಚಾದ ಗುರುತ್ವಾಕರ್ಷಣೆಯ ಸೆಳೆತದಿಂದ ಇಡೀ ದೇಹದ ರಕ್ತ ಕೇವಲ ಕಾಲಿನತ್ತಲೇ
ಹರಿಯ ತೊಡಗುತ್ತದೆ. ಒಂದೆಡೆ ಮಿದುಳು, ಶ್ವಾಸಕೋಶ, ಕೈಗಳಿಗೆ ರಕ್ತದ ಕೊರತೆ
ಹೆಚ್ಚಾಗತೊಡಗುತ್ತದೆ. ದೇಹದೆಲ್ಲೆಡೆ ರಕ್ತ ಪರಿಚಲನೆಗೆ ಅನುವು ಮಾಡುವ ಹೃದಯವೆಂಬ
'ಪಂಪ್‌'ಗೆ ಹೆಚ್ಚುವರಿ ಎಳೆಯುವ ಕೆಲಸ. ಕಣ್ಣು ಕತ್ತಲೆಯಿಟ್ಟುಕೊಳ್ಳುವುದರ ಜೊತೆಗೆ,
ಕ್ಷಣಗಣನೆಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಚೈತನ್ಯ ಮಿದುಳು ಕಳೆದುಕೊಳ್ಳುತ್ತದೆ. ಈ
'g' ತಾಳಿಕೆ ಅಂದರೆ ಬದಲಾದ ಹೆಚ್ಚುವರಿ ವೇಗೋತ್ಕರ್ಷವನ್ನು ತಡೆದುಕೊಳ್ಳಬಲ್ಲ
ಚೈತನ್ಯವನ್ನು ಪ್ರಯೋಗಶಾಲೆಗಳಲ್ಲಿ ಅಳೆಯಬಹುದು. ವಿಮಾನ ಚಾಲಕ ಅಥವಾ ಅವನೊಂದಿಗೆ ಪಯಣಿಸುವ
ಎಂಜಿನಿಯರ್‌ಗೆ ಸಾಮಾನ್ಯರಿಗಿಂತ ಹೆಚ್ಚಿನ 'g' ತಾಳಿಕೆಯಿರಬೇಕು. ಈ-16 ಸೇರಿದಂತೆ ಇಂದಿನ
ಆಧುನಿಕ ಯುದ್ಧ ವಿಮಾನಗಳು ಕನಿಷ್ಟವೆಂದರೂ ಒಂಭತ್ತು ಪಟ್ಟು 'g' ಒತ್ತಡವನ್ನು
ತಾಳಿಕೊಳ್ಳಬಲ್ಲವು. ಹಾಗಿದ್ದರೆ ಹೆಚ್ಚಾಗುವ ತೂಕ ಮತ್ತು ಕಮ್ಮಿಯಾಗುವ ರಕ್ತಪರಿಚಲನೆಯನ್ನು
ವಿಮಾನ ಚಾಲಕರು ತಡೆದುಕೊಳ್ಳುವುದು ಹೇಗೆ? ಹಾವೊಂದು ಕಚ್ಚಿದರೆ ಆ ಜಾಗದಿಂದ ರಕ್ತದ ಮೂಲಕ
ವಿಷ ಎಲ್ಲೆಡೆ ಹರಡದಂತೆ ಒಂದಷ್ಟು ದೂರದಲ್ಲಿ ಕಟ್ಟು ಹಾಕುವ ವಿಷಯ ನಿಮಗೆ ಗೊತ್ತು. ಇದೇ
ರೀತಿ ಹೊಟ್ಟೆಯ ಕೆಳಗೆ ಹಾಗೂ ಸೊಂಟದ ಮೇಲೆ ಬಲವಾದ ಕಟ್ಟೊಂದನ್ನು ಹಾಕಿದರೆ ರಕ್ತ ಪೂರ್ತಿ
ಕಾಲ್ಗಳತ್ತ ಹರಿಯುವುದನ್ನು ತಪ್ಪಿಸಬಹುದು. ಆದರೆ ಈ ಕಟ್ಟನ್ನು ಸಾಮಾನ್ಯ 'g'
ವಾತಾವರಣದಲ್ಲಿ ಹಾಕಿ ಹೊರಟರೆ ಕೆಲ ಹೊತ್ತಿನಲ್ಲೇ ರಕ್ತಪರಿಚಲನೆಯಿಲ್ಲದ ದೇಹದ ಕೆಳಭಾಗ
ನಿಷ್ಕ್ರಿಯವಾಗುವ ಅಪಾಯವಿದೆ. ಇಂಥ ತೊಂದರೆಗಳನ್ನು ದಾಟಿ ಚಾಲಕನಿಗೆ ನೆರವಾಗಬಲ್ಲ ತೊಡುಗೆಯೇ
'g-suit'. ಸೊಂಟದಿಂದ ಕಾಲ್ಗಳತನಕ ತೊಡಬಲ್ಲ ಈ ಉಡುಪನ್ನು ವಿಶೇಷವಾಗಿ ರೂಪಿಸಲಾಗಿದೆ.
ವಿಮಾನ ಹೆಚ್ಚುವರಿ 'g' ಒತ್ತಡಕ್ಕೆ ಒಳಪಟ್ಟ ಕ್ಷಣವೇ ಅನಿಲ ತುಂಬಿಕೊಂಡು ಮೈಗೆ
ಹತ್ತಿಕೊಳ್ಳುವ ಈ ತೊಡುಗೆ ರಕ್ತ ಕೆಳಗೆ ಹರಿಯುವುದನ್ನು ತಡೆಯುತ್ತದೆ. ವಿಮಾನ ಸಾಮಾನ್ಯ
ಸ್ಥಿತಿಗೆ ಮರಳುವ ತನಕ ತಡೆಗಟ್ಟುವ ಕಾರ್ಯ ಮುಂದುವರಿಸುತ್ತದೆ. ಸುಂಯ್ಯನೆ ವಿಮಾನ
ಕೆಳಗಿಳಿಯುವಾಗ ವೇಗೋತ್ಕರ್ಷ ಭೂಮಿಯದರ ವಿರುದ್ಧವಾಗಿರುತ್ತದೆ. ಈ ಸಂದರ್ಭದಲ್ಲಿ 'g'
ಕಮ್ಮಿಯಾಗುತ್ತಾ ಬಂದು, ದೇಹ ಹಗುರವಾಗತೊಡಗುತ್ತದೆ. ದೇಹದ ಕೆಳ ಭಾಗಕ್ಕೆ ಪೂರೈಕೆಯಾಗಿದ್ದ
ರಕ್ತ ಮೇಲ್ಭಾಗಕ್ಕೆ ಹರಿಯತೊಡಗುತ್ತದೆ. ತಲೆಯತ್ತ ಹೆಚ್ಚು ರಕ್ತ ಪೂರೈಕೆಯಾಗತೊಡಗುತ್ತದೆ.
ವಿಮಾನ ಮೇಲೇರುವಾಗ ಅಳ್ಳೆದೆಯಿಲ್ಲದ ದೇಹವೊಂದು ಒಂಭತ್ತು ಪಟ್ಟು 'g' ಒತ್ತಡವನ್ನು
ತಡೆದುಕೊಳ್ಳಬಹುದು. ಆದರೆ ಭೂಮಿಯ ವಿರುದ್ಧದ ವೇಗೋತ್ಕರ್ಷವನ್ನು ಮೂರು ಗಳಿಗಿಂತಲೂ
ಹೆಚ್ಚಿಗೆ ತಾಳಿಕೊಳ್ಳಲಾಗದು. ಈ ಹಗುರ ಸ್ಥಿತಿಯಲ್ಲಿ ಹೆಚ್ಚಿದ ಮೇಲ್ಮುಖ ರಕ್ತ ಚಲನೆಯಿಂದ
ನಾಳಗಳು ಹಿಗ್ಗಿ ಒಡೆದೇ ಹೋಗಬಹುದು. ಕಣ್ಗುಡ್ಡೆ ಸಿಕ್ಕಾಪಟ್ಟೆ ಹಿಗ್ಗಿ ಛಿದ್ರವಾಗಬಹುದು.
ಇಂಥ ಚಲನೆಗಳನ್ನು ತಡೆಗಟ್ಟಲೂ 'ಜೀ-ತೊಡುಗೆ' g-suit' ನೆರವಾಗುತ್ತದೆ. ವ್ಯಕ್ತಿಯಿಂದ
ವ್ಯಕ್ತಿಗೆ 'g' ಒತ್ತಡವನ್ನು ತಾಳಿಕೊಳ್ಳುವ ಸಾಮರ್ಥ್ಯ ಬದಲಾಗುತ್ತದೆ. ಜೀ-ತೊಡುಗೆಯ
ನೆರವಿಲ್ಲದೆಯೇ ನಾಲ್ಕರಿಂದ ಐದು 'g' ಒತ್ತಡವನ್ನು ತಾಳಿಕೊಂಡವರಷ್ಟೇ ಯುದ್ಧ ವಿಮಾನದಲ್ಲಿ
ಕೂಡಬಹುದು. ಇಳಿ ವಯಸ್ಸಿನವರು ಇಂಥ ಸಾಹಸಗಳಿಂದ ಸಾಮಾನ್ಯವಾಗಿ ದೂರ. ಈ ಬಗ್ಗೆ
ಚಿಂತಿಸುತ್ತಿರುವಾಗ ಮುಂಬೈಯಿಂದ ಬೆಂಗಳೂರಿಗೆ ಹಾರುತ್ತಿದ್ದ ಏರ್‌ಇಂಡಿಯಾದ ಏರ್‌ಬಸ್‌
ವಿಮಾನದಲ್ಲಿ ಒಮ್ಮೆಲೆ ಅಲುಗಾಟ. ವಿಮಾನ ಪರಿಚಾರಕರಿಂದ ಸುರಕ್ಷ ಣಾ ಬೆಲ್ಟ್‌ ಕಟ್ಟಿಕೊಳ್ಳಲು
ಸೂಚನೆ. ಕಿಟಕಿಯಿಂದಾಚೆ ಕಣ್ಣು ಹಾಯಿಸಿದರೆ ಕಪ್ಪನೆಯ ಮೋಡ. ಕೆಳಗೆಲ್ಲೋ ಸುರಿಯುತ್ತಿರುವ
ಮಳೆಯಿಂದಾಗಿ ಗಾಳಿಯ ಒತ್ತಡ ಏರುಪೇರಾಗಿರಬಹುದು. ನಾಗರಿಕ ವಿಮಾನಗಳಲ್ಲಿ ಯಾವಾಗಲೂ 'g'
ಏರುಪೇರಾಗದ ಪಯಣ. ಇಷ್ಟು ಪುಟ್ಟ ಅಲುಗಾಟವನ್ನು ತಡೆದುಕೊಳ್ಳುವುದೇ ನಮಗಿಷ್ಟು ಕಷ್ಟ.
ಅಂಥದರಲ್ಲಿ ಇನ್ನು ಯುದ್ಧ ವಿಮಾನದಲ್ಲಿ ಕುಳಿತವರ ಪಾಡೇನು? ಎಂಬ ಅನಿಸಿಕೆ
ಮೂಡುತ್ತಿದ್ದಂತೆ, ಸೀಟ್ ಬೆಲ್ಟ್ ಬಿಚ್ಚುವ ಸೂಚನೆ ವಿಮಾನ ಚಾಲಕರಿಂದ ಬಂತು

Hareeshkumar K
GHS HUSKURU
MALAVALLI TQ
MANDYA DT
MOB 9880328224

-- 
1. If a teacher wants to join STF, visit 
http://karnatakaeducation.org.in/KOER/en/index.php/Become_a_STF_groups_member
2. For STF training, visit KOER - 
http://karnatakaeducation.org.in/KOER/en/index.php
4. For Ubuntu 14.04 installation,    visit 
http://karnatakaeducation.org.in/KOER/en/index.php/Kalpavriksha 
4. For doubts on Ubuntu, public software, visit 
http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Why_public_software 
ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
--- 
You received this message because you are subscribed to the Google Groups 
"Maths & Science STF" group.
To unsubscribe from this group and stop receiving emails from it, send an email 
to mathssciencestf+unsubscr...@googlegroups.com.
To post to this group, send an email to mathssciencestf@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Reply via email to