ಸಂಜಯಸ್ಯ ಸುತಃ ಶಾಕ್ಯಃ ಶಾಕ್ಯಾಚ್ಛುದ್ಧೋಧನೋ ನೃಪಃ|

ಶುದ್ಧೋಧನಸ್ಯ ಭವಿತಾ ಸಿದ್ಧಾರ್ಥಃ ಪುಷ್ಕಲಃ ಸ್ಮೃತಃ||

ಇದು ಮತ್ಸ್ಯುರಾಣದ 271ನೇ ಅಧ್ಯಾಯದ 12ನೇ ಶ್ಲೋಕ. ಮತ್ತೊಮ್ಮೆ ಅವುಗಳ ಮೇಲೆ
ಕಣ್ಣುಹಾಯಿಸಿ ನೋಡಿ. ಅನೇಕ ಹೆಸರುಗಳು ಚಿರಪರಿಚಿತವೆನಿಸುತ್ತವೆ. ಸಂಜಯನ ಮಗ ಶಾಕ್ಯ. ಅವನ
ಸುತ ಶುದ್ಧೋಧನ. ಅವನ ಸಂತಾನ ಸಿದ್ಧಾರ್ಥ ಮತ್ತು ಅವನಿಗೆ ಜನಿಸಿದವನು ಪುಷ್ಕಲ. ಹೌದು, ಇದು
ಅಕ್ಷರಶಃ ಬುದ್ಧನ ವಂಶಾವಳಿಯೇ. ವಿಷ್ಣುಪುರಾಣ ಪುಷ್ಕಲನ ಹೆಸರನ್ನು ರಾಹುಲನೆಂದೂ
ದಾಖಲಿಸಿದೆ! ಅಲ್ಲಿಂದಾಚೆಗೆ ಪ್ರಸೇನಜಿತ, ಕ್ಷುದ್ರಕ, ಕುಲಕ, ಸುರಥ, ಸುಮಿತ್ರ ಈ ವಂಶದ
ಮುಂದಿನ ಕುಡಿಗಳಂತೆ. ಸುಮಿತ್ರನೊಂದಿಗೆ ಇಕ್ಷ್ವಾಕು ವಂಶದ ಅಂತ್ಯವೆಂದೂ ಪುರಾಣ
ಅಭಿಪ್ರಾಯಪಡುತ್ತದೆ.

ಇದೇ ಪುರಾಣ ಪ್ರತಿಯೊಬ್ಬ ರಾಜರ ಆಳ್ವಿಕೆಯ ಕಾಲವನ್ನು ಸ್ಪಷ್ಟವಾಗಿ ಹೇಳಿರುವುದರಿಂದ
ಅನುಮಾನಕ್ಕೆಡೆಯಿಲ್ಲದಂತೆ ಬುದ್ಧನ ಕಾಲವನ್ನು ಕ್ರಿ.ಪೂ.1800ರ ಆಸುಪಾಸೆಂದು
ಗ್ರಹಿಸಬಹುದು.‘ಯಾವುದು ಚರಿತ್ರೆ’ ಕೃತಿಯಲ್ಲಿ ಎಂ.ವಿ.ಆರ್. ಶಾಸ್ತ್ರಿಯವರು
ತಿರುವೆಂಕಟಾಚಾರ್ಯರ ಅಧ್ಯಯನವನ್ನೂ ಪ್ರಸ್ತಾಪಿಸುತ್ತ ಬುದ್ಧನ ಜನನವನ್ನು ಕ್ರಿ.ಪೂ. 1886ರ
ಮಾರ್ಚ್ 31 ಎಂದೂ, ನಿರ್ವಾಣ ಕ್ರಿ.ಪೂ. 1807ರ ಮಾರ್ಚ್ 27 ಎಂದೂ ನಿರೂಪಿಸುತ್ತಾರೆ.
ಅದಕ್ಕೆ ಬೇಕಾದ ನಕ್ಷತ್ರ, ತಿಥಿ, ವಾರಗಳನ್ನೆಲ್ಲ ಮುಂದಿಟ್ಟುಕೊಂಡು ನಡೆಸಿದ ಈ ಅಧ್ಯಯನ
ಪುರಾಣದ ಮತ್ತು ‘ರಾಜತರಂಗಿಣಿ’ಯ ಎಲ್ಲ ಸಾಕ್ಷ್ಯಳನ್ನು ಎತ್ತಿ ಹಿಡಿಯುತ್ತದೆ.

ಪಶ್ಚಿಮದ ಲೇಖಕರಿಗೆ ಇದನ್ನು ಜೀರ್ಣಿಸಿಕೊಳ್ಳಲಾಗಲಿಲ್ಲ. ಕ್ರಿ.ಪೂ.19ನೇ ಶತಮಾನಕ್ಕೆ
ಬುದ್ಧನನ್ನು ಸ್ಥಿರೀಕರಿಸಿದರೆ, ಕೃಷ್ಣ ಎಲ್ಲಿನವನು? ಇನ್ನು ಅವನಿಗಿಂತಲೂ ಹಳಬನಾದ ರಾಮನ
ಕಾಲಘಟ್ಟ ಎಂದಿನದು? ರಾಮನೇ ಅಷ್ಟೆಲ್ಲ ಹಿಂದೆ ಹೋಗಿ ನಿಂತರೆ ಇಕ್ಷ್ವಾಕು ವಂಶದ ಮೂಲಪುರುಷರ
ಕಥೆ ಏನು? ಋಷಿಗಳು ಯಾವಾಗಿನವರು ಮತ್ತು ಮನುವಿನ ಜೀವಿತ ಕಾಲ ಯಾವುದು!

ನಮ್ಮ ಇತಿಹಾಸ ಹಳೆಯದಾದಷ್ಟು ಕ್ರಿಶ್ಚಿಯನ್ನರು ಕಟ್ಟಿರುವ ಸೌಧ ಕುಸಿಯುವುದೆಂದು ಅವರಿಗೆ
ಖಂಡಿತ ಗೊತ್ತಿತ್ತು. ಹೀಗಾಗಿ ಪುರಾಣಗಳೆಲ್ಲ ‘ಬೊಗಳೆ’ ಎಂದುಬಿಟ್ಟರು. ರಾಮ-ಕೃಷ್ಣರನ್ನು
ದಂತಕಥೆ ಎಂದು ತಲೆಸವರಿದರು. ರಾಮ-ಕೃಷ್ಣರು ಹುಟ್ಟಿದ ನಾಡಿನಲ್ಲಿಯೇ ಅವರ ಬದುಕಿನ
ಸತ್ಯಾಸತ್ಯತೆಗಳ ಬಗ್ಗೆ ಇಂದಿಗೂ ಚರ್ಚೆ ನಡೆಯುತ್ತಿದೆಯೆಂದರೆ ಅದು ಬಿಳಿಯ ಇತಿಹಾಸಕಾರರನ್ನು
ನಂಬಿದ, ಒಪ್ಪಿದ ಪ್ರಭಾವವೇ.

ಆದರೆ ಅವರಿಗೆ ಅಡ್ಡವಾಗಿ ನಿಂತಿದ್ದು ಬುದ್ಧನೊಬ್ಬನೇ. ವಿದೇಶದ ಅನೇಕ ಇತಿಹಾಸಕಾರರು ಬುದ್ಧನ
ನಂತರ ಭಾರತಕ್ಕೆ ಬಂದು ಇಲ್ಲಿನ ಜನಜೀವನ, ಧರ್ಮದ ರೀತಿ ರಿವಾಜುಗಳನ್ನೆಲ್ಲ ವಿಸ್ತಾರವಾಗಿ
ಬರೆದಿಟ್ಟು ಹೋಗಿದ್ದರಿಂದ ಬುದ್ಧ ಹುಟ್ಟಿರಲಿಲ್ಲ ಎಂದು ಹೇಳುವ ಧಾರ್ಷ್ಯrವನ್ನು ಅವರು
ತೋರಲಿಲ್ಲ. ಆದರೆ ಅವನ ಬದುಕನ್ನು ಕ್ರಿ.ಪೂ.480ರ ಆಸುಪಾಸಿಗೆ ತಳ್ಳಿ 1,400 ವರ್ಷಗಳ
ಮುಂಚಿತ ಬುದ್ಧಲೋಕವನ್ನೇ ಸಂಕುಚಿತಗೊಳಿಸಿಬಿಟ್ಟರು. ಅಷ್ಟೇ ಅಲ್ಲ, ಧರ್ಮಸ್ಥಾಪನೆಗೆ ಸದಾ
ಹೆಣಗಾಡುತ್ತಿದ್ದ ಬ್ರಾಹ್ಮಣರನ್ನು ಮಟ್ಟಹಾಕಲೆಂದು ಬುದ್ಧನಿಗೂ ಬ್ರಾಹ್ಮಣರಿಗೂ ಕಟು
ವೈರತ್ವವನ್ನು ಆರೋಪಿಸಿದರು. ಕಟುವಾದ ಸಾಧನೆಯಿಂದ ದೇಹದ ಹಂದರ ಹಾಳಾಗುವುದೆಂದರಿತ ಬುದ್ಧ
ಮಧ್ಯಮಮಾರ್ಗ ಬೋಧಿಸಿ ಉದ್ಧಾರದ ಹೆದ್ದಾರಿ ನಿರ್ಮಾಣ ಮಾಡಿಕೊಟ್ಟವ. ಅಂಥವನು ಒಂದು ವರ್ಗದ
ವಿರುದ್ಧ ದ್ವೇಷ ಬೆಳೆಸಿಕೊಂಡು ಧರ್ಮಸ್ಥಾಪನೆ ಮಾಡಿಯಾನಾ? ಜಿಜ್ಞಾಸೆಗೆ ಬಹಳ ಅಂಶಗಳಿವೆ.

ವಿಲಿಯಂ ಜೋನ್ಸ್, ವಿನ್ಸೆಂಟ್ ಸ್ಮಿತ್, ಇ.ಜೆ.ರಾಪ್ಸನ್, ಮ್ಯಾಕ್ಸ್ ಮುಲ್ಲರ್ ಇವರೆಲ್ಲ
ಭಾರತದ ಕುರಿತಂತೆ ಸಾಕಷ್ಟು ಅಧ್ಯಯನ ನಡೆಸಿ ತಮ್ಮದೇ ಆದ ಸಿದ್ಧಾಂತಗಳನ್ನು
ಪ್ರತಿಪಾದಿಸಿದ್ದಾರೆ ಸರಿ. ಆದರೆ ಇದರ ಹಿಂದೆ ಅವರ ಮಿಷನರಿ ಬುದ್ಧಿ ಕೆಲಸ
ಮಾಡುತ್ತಿತ್ತಾದ್ದರಿಂದಲೇ ಅವರು ಸತ್ಯದ ಒರೆಗಲ್ಲಿನಲ್ಲಿ ದೀರ್ಘಕಾಲ ಬದುಕಲಾಗಲಿಲ್ಲ.
ಬುದ್ಧನನ್ನು ಕ್ರಿ.ಪೂ. 5ನೇ ಶತಮಾನಕ್ಕೆ ಎಳೆದು ನಿಲ್ಲಿಸುವ ಅಗತ್ಯ ಅವರಿಗೆ
ಬಂದದ್ದೇಕೆಂದರೆ ಅಶೋಕನಿಗೂ ಬುದ್ಧನಿಗೂ ಸಂಬಂಧ ಕಲ್ಪಿಸಬೇಕಾದ್ದರಿಂದ. ಅವರ ದೃಷ್ಟಿಯಲ್ಲಿ
ಮೌರ್ಯ ಸಾಮ್ರಾಜ್ಯವೇ ಅಲೆಗ್ಸಾಂಡರನ ಆಗಮನದ ನಂತರ ಸ್ಥಾಪಿತವಾದುದ್ದರಿಂದ ಬುದ್ಧನೂ
ಅಲ್ಲಿಯೇ ಆಸುಪಾಸಿನ ಕಾಲದಲ್ಲಿ ಹುಟ್ಟಬೇಕಾದುದು ಅವರಿಗೆ ಅನಿವಾರ್ಯವಾಯಿತು. ಈ
ಇತಿಹಾಸಕಾರರೆಲ್ಲ ಬೈಬಲ್ಲಿನ ನಂಬಿಕೆಗಳನ್ನು ಬದಿಗಿಟ್ಟು ಶುದ್ಧಾತ್ಮರಾಗಿ ಕುಳಿತಿದ್ದರೆ
ಇಂತಹ ಪ್ರಮಾದಗಳು ಆಗುತ್ತಿರಲಿಲ್ಲವೇನೋ?

ವಿಲಿಯಂ ಜೋನ್ಸ್ ತನ್ನ ಕೃತಿಯಲ್ಲಿ ಕಾಲ-ಘಟನೆಯ ತನ್ನ ಊಹೆಯನ್ನು ಪ್ರಕಟಿಸಿದ್ದಾನೆ.
ಅದರಲ್ಲಿ ಮನುವನ್ನು ಬೈಬಲ್ಲಿನ ಉಲ್ಲೇಖಿತ ಆಡಮ್ೆ ಸಮೀಕರಿಸಿ ಇವರಿಬ್ಬರ ಕಾಲ 5,794
ವರ್ಷಗಳಷ್ಟು ಹಿಂದೆ ಎಂದಿದ್ದಾನೆ. ಅವನ ಲೆಕ್ಕಾಚಾರಗಳೆಲ್ಲ 1788ಕ್ಕೆ ಸಂಬಂಧಿಸಿದ್ದರಿಂದ
ಮತ್ತೆರಡು ಶತಕಗಳನ್ನು ಅದಕ್ಕೆ ನಾವು ಸೇರಿಸಿಕೊಳ್ಳಬೇಕು ಅಷ್ಟೇ! ಅವರ ಪ್ರಕಾರ ರಾಮ
ಬದುಕಿದ್ದು ಕ್ರಿ.ಪೂ. 2029ರಲ್ಲಿ! ಆದರೆ ಆಧುನಿಕ ಅಧ್ಯಯನಗಳು ರಾಮನ ಕಾಲವನ್ನು ಕ್ರಿ.ಪೂ.
5114 ಎಂದಿವೆ. ಅಂದರೆ ಇಂದಿಗೆ 7,130 ವರ್ಷಗಳಷ್ಟು ಹಿಂದೆ. ಅದರರ್ಥ ಏನು ಗೊತ್ತೇ?
ವಿಜ್ಞಾನದ ಪ್ರಕಾರ ರಾಮನು ಬೈಬಲ್ಲಿನ ಉಲ್ಲೇಖಿತ ಮೊದಲ ಮಾನವ ಆಡಮ್ಂತ ಸಾವಿರಾರು ವರ್ಷ
ಪೂರ್ವ ಹುಟ್ಟಿದವನು! ಇನ್ನು ಮನುವಿನ ಕಾಲ ಯಾವುದಿರಬೇಕು? ಈ ಎಲ್ಲ ಪ್ರಶ್ನೆಗಳಿಗೂ ಒಂದೇ
ಉತ್ತರವೇನು ಗೊತ್ತೇ? ‘ಪುರಾಣಗಳು ಬೊಗಳೆ! ರಾಮ-ಕೃಷ್ಣರು ದಂತಕಥೆ ಅಷ್ಟೇ.’ ಇವುಗಳನ್ನು
ಪುನರುಚ್ಚರಿಸುವ ಗಿಣಿಗಳಿಗೆ ಕಾಳು ಹಾಕಿದರಾಯ್ತು. ಇನ್ನೊಂದಷ್ಟು ಕಾಲ ಸುಳ್ಳು ರಾಜ್ಯಭಾರ
ಮಾಡುತ್ತದೆ.

ಭಾರತೀಯರಿಗೆ ಇತಿಹಾಸ ಪ್ರಜ್ಞೆಯೇ ಇರಲಿಲ್ಲ, ಅದನ್ನೆಲ್ಲ ಕಲಿಸಿಕೊಟ್ಟವರು ತಾವೇ
ಎಂಬುದನ್ನು ಬಿಳಿಯ ಇತಿಹಾಸಕಾರರು ನಮ್ಮ ತಲೆಗೆ ತುರುಕಿದರ ಹಿನ್ನೆಲೆಯೂ ಇದೇ. ಇಲ್ಲವಾದಲ್ಲಿ
ಜಗತ್ತಿನ ಯಾವ ಇತಿಹಾಸದ ಕೃತಿಯೂ ಇಷ್ಟು ಸುಲಭಗ್ರಾಹ್ಯವಾಗಿ, ರೋಚಕವಾಗಿ ಇಲ್ಲವೇ ಇಲ್ಲ.
ಭಾರತೀಯರಲ್ಲಿ ಇತಿಹಾಸದ ಉಳಿಕೆಗೆಂದೇ ಜನಾಂಗವೊಂದು ಇರುತ್ತಿತ್ತು. ವಾಯುಪುರಾಣ ಇವರನ್ನು
‘ಸೂತ’ರೆಂದು ಗುರುತಿಸುತ್ತದೆ. ಜಿ.ವಿ.ಟಾಗರೆಯವರು ಮಾಡಿದ ವಾಯುಪುರಾಣದ ಅನುವಾದದಲ್ಲಿ
ಕ್ಷತ್ರಿಯ ಪುರುಷ ಮತ್ತು ಬ್ರಾಹ್ಮಣ ಸ್ತ್ರೀಗೆ ಹುಟ್ಟಿದ ಹಾಗ್ತೂ ಪುರಾಣ, ಇತಿಹಾಸವನ್ನು
ಮನೋಜ್ಞವಾಗಿ ಹೇಳಬಲ್ಲವನನ್ನು ಸೂತ ಎನ್ನಲಾಗಿದೆ. ಅದು ಯಾಜ್ಞ್ಯವಲ್ಕ್ಯ ಮತ್ತು ಮನುವಿನ
ಅಭಿಪ್ರಾಯವಂತೆ. ಹೀಗೊಬ್ಬ ಸೂತನು ಬಂದು ಕೈಮುಗಿದು ನಿಂತಾಗ ಋಷಿ ಲೋಮಹರ್ಷಣರು ಅವನನ್ನು
ಆದರಿಸಿ ಪುರಾಣ ಕೇಳುವ ಬಯಕೆ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಸೂತರನ್ನು ಸ್ವತಃ ವ್ಯಾಸರೇ
ಈ ಕೆಲಸಕ್ಕೆ ನೇಮಿಸಿದ್ದಾಗಿ ಅವನನ್ನು ಹೊಗಳಿದರು. ಅದಕ್ಕೆ ಪ್ರತಿಯಾಗಿ ಸೂತ ಕೈಮುಗಿದು
‘ದೇವತೆಗಳ, ಋಷಿಗಳ, ಮಹಾರಾಜರುಗಳ ವಂಶಾವಳಿಗಳನ್ನು ಕಾಪಿಡುವುದೇ ನಮ್ಮ ಜವಾಬ್ದಾರಿ’ ಎಂದ.
ಇತಿಹಾಸ ಮತ್ತು ಪುರಾಣಗಳಲ್ಲಿನ ಮಹಾಪುರುಷರ ಬದುಕನ್ನು ಸಮಾಜಕ್ಕೆ ಮುಟ್ಟಿಸುವುದು ತಮ್ಮ
ಕೆಲಸವೆಂಬುದನ್ನು ಮತ್ತೆ ಮತ್ತೆ ಹೇಳಿದ.

ಉತ್ತರ ಕರ್ನಾಟಕದ ಕೆಲವೆಡೆ ಈಗಲೂ ಈ ಪದ್ಧತಿ ನೋಡಸಿಗುತ್ತದೆ. ಹೆಳವರೆಂದು ಕರೆಸಿಕೊಳ್ಳುವ
ಈ ಜನ ಒಂದಷ್ಟು ಮನೆಗಳ ಪರಂಪರೆಯನ್ನು ತಾವು ಕಾಪಾಡಿಡುತ್ತಾರೆ. ಪೀಳಿಗೆಯಿಂದ ಪೀಳಿಗೆಗೆ
ಅದನ್ನು ವರ್ಗಾಯಿಸುತ್ತ ಹೋಗುತ್ತಾರೆ. ವರ್ಷಕ್ಕೊಮ್ಮೆ ಅವರವರ ಮನೆಗೆ ಹೋಗಿ ಎಲ್ಲವನ್ನೂ
ನೆನಪಿಸಿಕೊಟ್ಟು ತಮಗೆ ಬೇಕಾದ್ದನ್ನು ದಾನವಾಗಿ ಪಡಕೊಂಡು ಬರುತ್ತಾರೆ. ಬಹುಶಃ
ಜಗತ್ತಿನಲ್ಲೆಲ್ಲೂ ಕಾಣಸಿಗದ ಇತಿಹಾಸವನ್ನುಳಿಸುವ ಅಪರೂಪದ ಪರಿ ಇದು. ಸರಿಯಾಗಿ ಪುರಾಣ
ಶ್ರವಣ ಮಾಡಿದರೆ ಹತ್ತಾರು ಸಾವಿರ ವರ್ಷಗಳ ಪರಂಪರೆಯನ್ನು ಮತ್ತೊಮ್ಮೆ ನೆನಪಿಸಿಕೊಟ್ಟಂತೆ.
ಇದು ನಮ್ಮ ಶಾಲೆಯ ಇತಿಹಾಸ ಕಥನಗಳಂತೆ ನೀರಸವಾಗದಿರಲೆಂದೇ ಅದಕ್ಕೊಂದಿಷ್ಟು ಕಥೆಗಳನ್ನು
ಸೇರಿಸಿ ರೋಚಕಗೊಳಿಸಿ ಹೇಳಲು-ಕೇಳಲು ಆನಂದದಾಯಕವಾಗಿಸಿದ್ದು ನಮ್ಮ ಹಿರಿಯರು!

ಬಿಡಿ. ನಾನು ಇದರ ಆಳಕ್ಕೆ ಹೋಗಲಿಚ್ಛಿಸುವುದಿಲ್ಲ. ನಮ್ಮ ಮುಂದಿರುವುದು ಮಗಧ
ಸಾಮ್ರಾಜ್ಯವಷ್ಟೇ! ಅಲೆಗ್ಸಾಂಡರನು ಇಲ್ಲಿಗೆ ಬಂದಾಗ ಮಗಧ ಸಾಮ್ರಾಜ್ಯವಿತ್ತೋ ಅಥವಾ
ಅದಕ್ಕೂ ಸಾವಿರ ವರ್ಷಗಳ ಮುನ್ನ ಇತ್ತೋ ಇತಿಹಾಸ ವೈಜ್ಞಾನಿಕರು ಅದನ್ನು ನಿಶ್ಚಯಿಸಲಿ. ಆದರೆ
ಇದ್ದ ಮಗಧ ಸಾಮ್ರಾಜ್ಯವಂತೂ ಬಲಾಢ್ಯವಾಗಿ ಭರತಖಂಡವನ್ನು ಆಳುತ್ತ ನಿಂತಿತ್ತು. ಅನುಮಾನವೇ
ಇಲ್ಲ.

ಮಗಧ ಅನ್ನೋದು ಇಡೀ ಭರತ ಖಂಡವಲ್ಲ. ಅದು ಒಂದು ಗಣರಾಜ್ಯವಾಗಿತ್ತೆನ್ನಬಹುದು. ಹೀಗೆ
ಹತ್ತಾರು ಗಣರಾಜ್ಯಗಳಿದ್ದವು. ರೋಮಿಲಾ ಥಾಪರ್ ತರಹದ ಇತಿಹಾಸಕಾರರು ಕ್ರಿ.ಪೂ. 6ನೇ ಶತಮಾನದ
ವೇಳೆಗೆ ಭಾರತದಲ್ಲಿ ಜನಪದದ ಕಲ್ಪನೆಗಳು ಉದಿಸಿದವು ಎನ್ನುತ್ತಾರೆ. ಅದಕ್ಕೆ ಮತ್ತೆ ಅವರು
ಬುದ್ಧನ ಕಾಲದ ಸಾಹಿತ್ಯವನ್ನೂ ಉದ್ಧರಿಸುತ್ತಾರೆ. ಅವುಗಳಲ್ಲಿ ಉಲ್ಲೇಖಗೊಂಡ ಅಂಗ, ಕಾಶಿ,
ಕೋಸಲ, ವೃಜ, ಮಲ್ಲ, ಚೇದಿ, ವತ್ಸ, ಕುರು, ಪಾಂಚಾಲ, ಮತ್ಸ್ಯ ಶೂರಸೇನ, ಅಶ್ವಕ, ಅವಂತಿ,
ಗಾಂಧಾರ, ಕಾಂಬೋಜ ಮೊದಲಾದವುಗಳನ್ನು ಉದಾಹರಿಸುತ್ತಾರೆ. ಆದರೆ ಇವುಗಳಲ್ಲಿ ಬಹುತೇಕ
ಹೆಸರುಗಳು ಮಹಾಭಾರತದಲ್ಲಿಯೇ ಉಲ್ಲೇಖಗೊಂಡಿರುವುದನ್ನು ಮರೆಯುತ್ತಾರೆ. ಕುರುಕ್ಷೇತ್ರ
ಯುದ್ಧದ ಸಂದರ್ಭದಲ್ಲಿ ಯಾವ-ಯಾವ ರಾಜರು ಯಾರ-ಯಾರ ಸೇನೆಯಲ್ಲಿದ್ದರೆಂಬುದಕ್ಕೆ ಸ್ಪಷ್ಟ
ಉಲ್ಲೇಖಗಳಿವೆ. ಅದು ಬಿಡಿ. ಋಗ್ವೇದದಲ್ಲಿಯೇ, ತನ್ನ ಮೇಲೆ ಏರಿಬಂದ 10 ರಾಜರನ್ನು
ಸೋಲಿಸಿದ ಸುದಾಸ ಅವರನ್ನು ದಶದಿಕ್ಕುಗಳಿಗೂ ಓಡಿಸಿದ ಎಂದು ಉಲ್ಲೇಖವಿದೆ. ಆ ಕಾಲದಲ್ಲಿಯೇ
ಕೆಲವು ಗುಂಪಿನ ಜನರು ತಮ್ಮ ಜನಾಂಗದ ಹೆಸರಲ್ಲಿ ಸೀಮೆ ಕಟ್ಟಿಕೊಂಡು ರಾಜ್ಯವಾಳಿದ್ದು
ಎಲ್ಲರಿಗೂ ತಿಳಿದಿರುವಂಥದ್ದೇ. ಯಾದವ, ಕುರು, ದ್ರುಹ್ಯು ಇವೆಲ್ಲ ಅದೇ ರೀತಿ ಕಟ್ಟಲ್ಪಟ್ಟ
ಸೀಮೆಗಳು. ಬುದ್ಧ ಸಾಹಿತ್ಯಗಳ ಪ್ರಕಾರ ಇವು ಜನಪದ, ಮಹಾಜನಪದ, ರಥ, ಅಂತರರಥ, ತಿರೋರಥ,
ದೇಶ, ಪ್ರದೇಶ, ಜನಪದ ಪ್ರದೇಶ, ಮಹಾಪ್ರದೇಶ, ಗಣ, ಸಂಘಗಳಾಗಿ ವಿಂಗಡಿಸಲ್ಪಟ್ಟಿವೆ.

ಮಗಧ ಇಂತಹುದೇ ಒಂದು ಮಹಾಜನಪದವಾಗಿ ಕೊನೆಗೆ ಮಹಾಪ್ರದೇಶವಾಗಿ ಬೆಳೆದು ನಿಂತಿತು. ವಿಷ್ಣು
ಪುರಾಣದ ಪ್ರಕಾರ ಮಗಧ ಸಾಮ್ರಾಜ್ಯ ಬೃಹದ್ರಥನಿಂದ ಶುರುವಾಯಿತು. ಸಾವಿರ ವರ್ಷದವರೆಗೆ
ಆಳಲ್ಪಟ್ಟಿತು. ಆನಂತರ ಪ್ರದ್ಯೋತ ಮತ್ತು ಶಿಶುನಾಗನ ವಂಶವೂ ಮಗಧ ಸಾಮ್ರಾಜ್ಯವನ್ನು ಆಳಿತು.
ಶಿಶುನಾಗನ ಆಳ್ವಿಕೆ ಶುರುವಾಗಿದ್ದು ಇಂದಿಗೆ ಸುಮಾರು 4,000 ವರ್ಷಗಳ ಹಿಂದೆ! ಇದರಲ್ಲಿ
ಬಿಂಬಸಾರ ಮತ್ತು ಅಜಾತಶತ್ರುಗಳ ಹೆಸರು ಬಲುವಾಗಿ ಕೇಳಿಬರುತ್ತದೆ.

ಬಿಂಬಸಾರನೇ ಮಗಧ ಸಾಮ್ರಾಜ್ಯ ಸ್ಥಾಪಿಸಿದನೆಂದು ಕೆಲವರು ಅಭಿಪ್ರಾಯಪಡುವುದುಂಟು. ಆತ ತನ್ನ
ಗಡಿಗೆ ಹೊಂದಿಕೊಂಡಿದ್ದ ಅಂಗದೇಶವನ್ನು ಮಗಧಕ್ಕೆ ಸೇರಿಸಿಕೊಂಡ. ಕೋಶಲ ಮತ್ತು ವೈಶಾಲಿ
ರಾಜ್ಯಗಳೊಂದಿಗೆ ವೈವಾಹಿಕ ಸಂಬಂಧ ಬೆಸೆದು ಗಟ್ಟಿ ಮಾಡಿಕೊಂಡ. ಒಂದೆಡೆ ಮದುವೆಗಳಿಂದ
ಮತ್ತೊಂದೆಡೆ ಕತ್ತಿಯ ಸಾಮರ್ಥ್ಯದಿಂದ ತನ್ನ ರಾಜ್ಯವನ್ನು ವಿಸ್ತರಿಸುತ್ತ ನಡೆದವನು
ಬಿಂಬಸಾರ. ಬೌದ್ಧ ಸಾಹಿತ್ಯಗಳಾದ ಮಹಾವಗ್ಗ, ವಿನಯ ಪಿಟಕಗಳ ಪ್ರಕಾರ ಬಿಂಬಸಾರ 80 ಸಾವಿರಕ್ಕೂ
ಹೆಚ್ಚು ಹಳ್ಳಿಗಳ ಒಡೆಯನಾಗಿದ್ದ. ಇವುಗಳ ಮುಖ್ಯಸ್ಥರು ಮಹಾಸಭೆಗೆಂದು ಕೆಲವೊಮ್ಮೆ
ಸೇರುತ್ತಿದ್ದುದನ್ನು ಅವರು ದಾಖಲಿಸಿದ್ದಾರೆ.

ಬಿಂಬಸಾರನಿಗೆ ಅನೇಕ ಮಕ್ಕಳಿದ್ದರು. ಅಜಾತಶತ್ರು ಒಬ್ಬ. ಅವನಂತೂ ತಂದೆಯನ್ನು ಕೂಡಿ ಹಾಕಿ
ಅನ್ನ, ನೀರು ಕೊಡದೇ ಸಾಯಿಸಿ ಪಟ್ಟವೇರಿದ. ಕಥೆ ಬಲು ರೋಚಕವಾಗಿದೆ. ತಂದೆ ತೀರಿಕೊಂಡ
ದಿನವೇ ಅಜಾತಶತ್ರುವಿಗೆ ಪುತ್ರ ಜನನವೂ ಆಗಿತ್ತು. ಮಂತ್ರಿಗಳು ಎರಡೂ ಸುದ್ದಿಯನ್ನು ಪಡೆದು
ಮಗುವಿನಾಗಮನದ ವಿಚಾರ ಮೊದಲು ಮುಟ್ಟಿಸಿದರಂತೆ. ಅಜಾತಶತ್ರುವಿನೆದುರಿಗೆ ಮಗುವಿನ ಮುಖ ಮತ್ತು
ತಂದೆಯ ಕಾರುಣ್ಯಗಳು ಹಾದುಹೋದವು. ತಾನು ತಂದೆಯಾದ ಮೇಲೆ ಅವನಿಗೆ ತನ್ನ ತಂದೆಯ
ನೆನಪಾಯ್ತು. ಬಿಂಬಸಾರನನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿದ. ಮಂತ್ರಿಗಳು ಎರಡನೇ
ಸುದ್ದಿಯನ್ನು ಮುಂದಿಟ್ಟರು. ಅಜಾತಶತ್ರು ಕಣ್ಣೀರಾಗಿಬಿಟ್ಟ. ತಾಯಿಯ ಬಳಿ ಓಡಿದ. ಕಾಲಿಗೆ
ಬಿದ್ದು ಕ್ಷಮೆ ಕೇಳಿದ. ಆದರೇನು? ಅಷ್ಟರೊಳಗೆ ಎಲ್ಲವೂ ಮುಗಿದು ಹೋಗಿತ್ತು! ಮಗಧ
ಸಾಮ್ರಾಜ್ಯದ ಶ್ರೇಷ್ಠ ದೊರೆಯ ಅಂತ್ಯ ದಾರುಣವಾಗಿತ್ತು.

ಅಜಾತಶತ್ರುವನ್ನೂ ಅವನ ಮಗ ಕೊಂದು ಪಟ್ಟಕ್ಕೇರಿದನಂತೆ. ತಾತ ತೀರಿಕೊಂಡೊಡನೆ ಹುಟ್ಟಿದ
ಮೊಮ್ಮಗ! ಪ್ರಪಂಚದ ಬೆನ್ನಟ್ಟಿದಷ್ಟು ನೋವು ಕಟ್ಟಿಟ್ಟ ಬುತ್ತಿ ಎಂಬುದಕ್ಕೆ ಅಜಾತಶತ್ರು
ಸಾಕ್ಷಿಯಾಗಿಬಿಟ್ಟ! ಇದೇ ವಂಶದಲ್ಲಿ ಮುಂದೆ ಧನನಂದರಾದಿಯಾಗಿ ಒಂಭತ್ತು ಜನ ಬಂದು ಮಗಧ
ಸಾಮ್ರಾಜ್ಯವನ್ನು ಬಲಾಢ್ಯ ಕೋಟೆಯಾಗಿ ಕಟ್ಟಿದರು. ಆದರೆ ಆಂತರಿಕವಾಗಿ ಕುಸಿದು ಹೋದರು.

ಇತಿಹಾಸ ಮಗ್ಗುಲು ಬದಲಿಸಲು ಕಾಯುತ್ತಿತ್ತು.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"KannadaSTF - ಕನ್ನಡ ಭಾಷಾ  ಶಿಕ್ಷಕರ ವೇದಿಕೆ" group.
To unsubscribe from this group and stop receiving emails from it, send an email 
to kannadastf+unsubscr...@googlegroups.com.
To post to this group, send an email to kannadastf@googlegroups.com.
Visit this group at https://groups.google.com/group/kannadastf.
To view this discussion on the web, visit 
https://groups.google.com/d/msgid/kannadastf/CAOqaUtnnHNQ5Z8zKdugKv_%3D035asg2pOTxmu-s5R-8Njt2XUXQ%40mail.gmail.com.
For more options, visit https://groups.google.com/d/optout.

Reply via email to