https://www.vishwavani.news/%e0%b2%a8%e0%b3%8d%e0%b2%af%e0%b2%be%e0%b2%b6%e0%b3%8d-%e0%b2%b5%e0%b2%bf%e0%b2%b2%e0%b3%8d%e2%80%8c%e0%b2%b0%e0%b2%a8%e0%b3%8d%e0%b2%a8%e0%b3%81-%e0%b2%b0%e0%b2%be%e0%b2%ae%e0%b2%be%e0%b2%a8/
*ನ್ಯಾಶ್, ವಿಲ್‌ರನ್ನು ರಾಮಾನುಜನ್‌ಗೆ ಹೋಲಿಸಬಹುದು ಎನ್ನುವುದಾದರೆ ನಮ್ಮ ರಾಮಾನುಜನ್ ಎಂಥ ಮಹಾನ್ ವ್ಯಕ್ತಿಯಿದ್ದಿರಬಹುದು?!* Saturday, 24.12.2016 ಪ್ರತಾಪ್ ಸಿಂಹ <https://www.vishwavani.news/author/pratap/> No Comments <https://www.vishwavani.news/#facebook> <https://www.vishwavani.news/#twitter> <https://www.vishwavani.news/#google_gmail> <https://www.vishwavani.news/#whatsapp>Share <https://www.addtoany.com/share#url=https%3A%2F%2Fwww.vishwavani.news%2F%25e0%25b2%25a8%25e0%25b3%258d%25e0%25b2%25af%25e0%25b2%25be%25e0%25b2%25b6%25e0%25b3%258d-%25e0%25b2%25b5%25e0%25b2%25bf%25e0%25b2%25b2%25e0%25b3%258d%25e2%2580%258c%25e0%25b2%25b0%25e0%25b2%25a8%25e0%25b3%258d%25e0%25b2%25a8%25e0%25b3%2581-%25e0%25b2%25b0%25e0%25b2%25be%25e0%25b2%25ae%25e0%25b2%25be%25e0%25b2%25a8%2F&title=%E0%B2%A8%E0%B3%8D%E0%B2%AF%E0%B2%BE%E0%B2%B6%E0%B3%8D%2C%20%E0%B2%B5%E0%B2%BF%E0%B2%B2%E0%B3%8D%E2%80%8C%E0%B2%B0%E0%B2%A8%E0%B3%8D%E0%B2%A8%E0%B3%81%20%E0%B2%B0%E0%B2%BE%E0%B2%AE%E0%B2%BE%E0%B2%A8%E0%B3%81%E0%B2%9C%E0%B2%A8%E0%B3%8D%E2%80%8C%E0%B2%97%E0%B3%86%20%E0%B2%B9%E0%B3%8B%E0%B2%B2%E0%B2%BF%E0%B2%B8%E0%B2%AC%E0%B2%B9%E0%B3%81%E0%B2%A6%E0%B3%81%20%E0%B2%8E%E0%B2%A8%E0%B3%8D%E0%B2%A8%E0%B3%81%E0%B2%B5%E0%B3%81%E0%B2%A6%E0%B2%BE%E0%B2%A6%E0%B2%B0%E0%B3%86%20%E0%B2%A8%E0%B2%AE%E0%B3%8D%E0%B2%AE%20%E0%B2%B0%E0%B2%BE%E0%B2%AE%E0%B2%BE%E0%B2%A8%E0%B3%81%E0%B2%9C%E0%B2%A8%E0%B3%8D%20%E0%B2%8E%E0%B2%82%E0%B2%A5%20%20%E0%B2%AE%E0%B2%B9%E0%B2%BE%E0%B2%A8%E0%B3%8D%20%E0%B2%B5%E0%B3%8D%E0%B2%AF%E0%B2%95%E0%B3%8D%E0%B2%A4%E0%B2%BF%E0%B2%AF%E0%B2%BF%E0%B2%A6%E0%B3%8D%E0%B2%A6%E0%B2%BF%E0%B2%B0%E0%B2%AC%E0%B2%B9%E0%B3%81%E0%B2%A6%E0%B3%81%3F!> Posted In : ಅಂಕಣಗಳು <https://www.vishwavani.news/category/columns/>, ಬೆತ್ತಲೆ ಜಗತ್ತು <https://www.vishwavani.news/category/columns/betalejagathu/> “He can be compared to a great mathematician like Srinivasa Ramanujan!’ಹಾಗಂತ ಅಮೆರಿಕದ ಖ್ಯಾತ ಗಣಿತಶಾಸ್ತ್ರಜ್ಞ ಜಾನ್ ಫೋರ್ಬ್‌ಸ್ ನ್ಯಾಶ್ ಅವರನ್ನು ಉಲ್ಲೇಖಿಸಿ “Beautiful Mind’ ಎಂಬ ಅವರ ಜೀವನಚರಿತ್ರೆಯಲ್ಲಿ ಹೇಳಲಾಗುತ್ತದೆ. 1997ರಲ್ಲಿ ಬಿಡುಗಡೆಯಾದ “Good Will Hunting’ ಎಂಬ ಚಿತ್ರದಲ್ಲೂ ಅದರ ಮುಖ್ಯ ಪಾತ್ರಧಾರಿ ವಿಲ್ ಹಂಟಿಂಗ್ ಬಗ್ಗೆ “Will might have the potential to be as great a mathematician as the legendary Srinivasa Ramanujan’ ಎಂಬ ಹೋಲಿಕೆ ಬರುತ್ತದೆ! ಅಂದರೆ ನಮ್ಮ ಶ್ರೀನಿವಾಸ ರಾಮಾನುಜನ್ ಎಂಥ ಮಹಾನ್ ವ್ಯಕ್ತಿಯಾಗಿದ್ದಿರಬಹುದು? ನೀವೇ ಯೋಚನೆ ಮಾಡಿ, ‘ಸಚಿನ್ ತೆಂಡೂಲ್ಕರ್‌ನನ್ನು ಡಾನ್ ಬ್ರಾಡ್ಮನ್‌ಗೆ ಹೋಲಿಸಬಹುದು ಅಂದರೆ’ ಡಾನ್ ಬ್ರಾಡ್ಮನ್ Bench mark ಎಂದಂತಾಯಿತು. ಅದನ್ನೇ ಸರಳವಾಗಿ ಹೇಳುವುದಾದರೆ 100 ಅಂಕಗಳಿಗೆ ಪರೀಕ್ಷೆ ನಡೆಯುತ್ತಿದೆ ಎಂದಾದರೆ ಗರಿಷ್ಠ ಮಿತಿಯಾದ ‘100’ Bench mark! ಅಷ್ಟಕ್ಕೂ ನೂರಕ್ಕಿಂತ ಹೆಚ್ಚು ಅಂಕ ಪಡೆಯಲು ಸಾಧ್ಯವಿಲ್ಲ. ಹಾಗಿರುವಾಗ ‘ಗುಡ್ ವಿಲ್ ಹಂಟಿಂಗ್’ ಚಿತ್ರದಲ್ಲಿ ಬರುವ ಯುವ ಗಣಿತಶಾಸ್ತ್ರಜ್ಞ ವಿಲ್ ಹಂಟಿಂಗ್‌ನದ್ದು ಕಾಲ್ಪನಿಕ ಪಾತ್ರವೇ ಆಗಿದ್ದರೂ ಆತ ಶ್ರೀನಿವಾಸ ರಾಮಾನುಜನ್ ಅವರಂಥ ಮಹಾನ್ ಗಣಿತಶಾಸ್ತ್ರಜ್ಞನಾಗುವ ಶಕ್ಯತೆ ಹೊಂದಿದ್ದಾನೆ ಎನ್ನುತ್ತಾರೆಂದರೆ ರಾಮಾನುಜನ್ ಅವರೇ Bench mark ಎಂದಾಗುತ್ತದಲ್ಲವೆ? ಅಷ್ಟೇ ಅಲ್ಲ, 1994ರಲ್ಲಿ ಅರ್ಥಶಾಸ್ತ್ರಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ಮ್ಯಾಥಮೆಟೀಶಿಯನ್ ಜಾನ್ ನ್ಯಾಶ್ ಅವರನ್ನು ‘ಮಹಾನ್ ಗಣಿತಜ್ಞ ರಾಮಾನುಜನ್‌ರಿಗೆ ಹೋಲಿಸಬಹುದು’ಎನ್ನುತ್ತಾರೆಂದರೆ ರಾಮಾನುಜನ್ ಎಷ್ಟು ಗ್ರೇಟ್ ಇರಬಹುದು? ಅಬ್ಬಾ! ಅವರದ್ದು ಗಣಿತದ ಇತಿಹಾಸದಲ್ಲೇ ಅತ್ಯಂತ ಕುತೂಹಲಕಾರಿ ಕಥೆ. ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿದ್ದ ಜಿ.ಎಚ್. ಹಾರ್ಡಿಂಗ್ ಅದಾಗಲೇ ವಿಶ್ವವಿಖ್ಯಾತ ಗಣಿತ ಶಾಸ್ತ್ರಜ್ಞನೆನಿಸಿಕೊಂಡಿದ್ದರು. ಅಂಥ ಗಣಿತಶಾಸ್ತ್ರಜ್ಞರಿಗೆ ಉತ್ತರ ಬಯಸಿ ಪತ್ರಗಳು ಬರುವುದು ಸಹಜ. ಭಾರತದಿಂದಲೂ ಒಂದು ಪತ್ರ ಬಂದಿತ್ತು. ಮದ್ರಾಸ್ ಪೋರ್ಟ್ ಟ್ರಸ್ಟ್ ನಲ್ಲಿ ಗುಮಾಸ್ತರಾಗಿರುವ ಶ್ರೀನಿವಾಸ ರಾಮಾನುಜನ್ ಎಂಬ ಹೆಸರಿನಲ್ಲಿ ಬಂದಿದ್ದ ಆ ಹತ್ತು ಪುಟಗಳ ಪತ್ರದಲ್ಲಿ 120 ಥೇರಮ್‌ಗಳಿದ್ದವು ಹಾಗೂ ಅವುಗಳನ್ನು ರೂಪಿಸಿದ್ದು ತಾನೇ ಎಂದು ಪ್ರತಿಪಾದಿಸಲಾಗಿತ್ತು. ನಿರಾಸಕ್ತಿಯಿಂದಲೇ ಅವುಗಳತ್ತ ಕಣ್ಣುಹಾಯಿಸಿದ ಹಾರ್ಡಿ ಪತ್ರವನ್ನು ಪಕ್ಕಕ್ಕೆ ಹಾಕಿದರು. ಆದರೆ ಆ ಪತ್ರದಲ್ಲಿ ಗಣಿತದ ಸೂತ್ರಗಳ ಬಗ್ಗೆ ಬರೆಯಲಾಗಿದ್ದ ವಿಷಯಗಳು ಹಾರ್ಡಿಯವರು ಮತ್ತೆ ಅದರತ್ತ ದೃಷ್ಟಿಹಾಯಿಸುವಂತೆ ಮಾಡಿದವು. ಈ ಬಾರಿ ಸಹ ಗಣಿತಶಾಸ್ತ್ರಜ್ಞ ಜೆ.ಇ. ಲಿಟ್ಲಿವುಡ್ ಅವರನ್ನೂ ಬರಮಾಡಿಕೊಂಡ ಹಾರ್ಡಿ, ರಾಮಾನುಜನ್ ಕಳುಹಿಸಿದ್ದ ಪತ್ರವನ್ನು ಕೂಲಂಕಷವಾಗಿ ಪರಾಮರ್ಶೆ ಮಾಡಿದರು. 1913ರಲ್ಲಿ ನಡೆದ ಈ ಘಟನೆ ಗಣಿತ ಜಗತ್ತಿನ ಹೊಸ ಮೈಲುಗಲ್ಲು. ರಾಮಾನುಜನ್ ವಿವರಿಸಿದ್ದ ಕೆಲವು ಥೇರಮ್‌ಗಳು ವಿಚಿತ್ರವಾಗಿ ಕಾಣುತ್ತಿದ್ದರೂ ಅವುಗಳಲ್ಲಿ ನಿಜಾಂಶ ವಿಲ್ಲದೇ ಹೋಗಿದ್ದರೆ ಅವುಗಳನ್ನು ಸೃಷ್ಟಿಸುವ ಕಲ್ಪನೆಯೇ ಹೊಳೆಯುತ್ತಿರಲಿಲ್ಲ ಎಂಬುದು ಹಾರ್ಡಿಯವರಿಗೆ ಮನವರಿಕೆ ಯಾಯಿತು. ಹೀಗೆ ಮದ್ರಾಸ್‌ನ ಯಾವುದೋ ಮೂಲೆಯಲ್ಲಿ ಕೊಳೆಯುತ್ತಿದ್ದ ಪ್ರತಿಭೆಗೆ ಜಾಗತಿಕ ಮನ್ನಣೆ ದೊರೆಯು ವಂತಾಯಿತು. 1887, ಡಿಸೆಂಬರ್ 22ರಂದು ತಮಿಳುನಾಡಿನಲ್ಲಿ ಜನಿಸಿದ ರಾಮಾನುಜನ್ ಅವರದ್ದು ತೀರಾ ಬಡ ಕುಟುಂಬ. ಕುಂಬಕೋಣಂನಲ್ಲಿ ಅಕೌಂಟೆಂಟ್ ಆಗಿದ್ದ ಅವರ ತಂದೆಗೆ ಬರುತ್ತಿದ್ದ ಸಂಬಳದಲ್ಲಿ ಕುಟುಂಬ ನಿರ್ವಹಣೆಯೇ ಕಷ್ಟವಾಗಿತ್ತು. ಆದರೆ ಓದಿನಲ್ಲಿ ಮುಂದಿದ್ದ ರಾಮಾನುಜನ್, 1903ರಲ್ಲಿ ನಡೆದ ಹೈಸ್ಕೂಲ್‌ನ ಅಂತಿಮ ಪರೀಕ್ಷೆಯಲ್ಲಿ ಮೊದಲಿಗರಾಗಿ ಪಾಸಾದ ಕಾರಣ ಕಾಲೇಜಿಗೆ ಸೇರಲು ಸ್ಕಾಲರ್‌ಶಿಪ್ ಸಿಕ್ಕಿತು. ಅದರಲ್ಲೂ A Synopsis of Elementary Results in Pure and Applied Mathematics ಎಂಬ ಪುಸ್ತಕ ರಾಮಾನುಜನ್ ಅವರನ್ನು ಚಿಂತೆಗೆ ಹಚ್ಚಿತು. ಆ ಪುಸ್ತಕ ಗಣಿತದ ಲೆಕ್ಕಗಳ ಫಲಿತಾಂಶವನ್ನೇನೋ ನೀಡುತ್ತಿತ್ತು. ಆದರೆ ಅದರಲ್ಲಿ ಪ್ರೂಫ್‌ಗಳೇ ಇರಲಿಲ್ಲ. ಅಂದರೆ ತರ್ಕ ಸಮೇತ ವಿವರಿಸುವ ಬದಲು ಬರೀ ಫಲಿತಾಂಶಗಳನ್ನಷ್ಟೇ ನೀಡಲಾಗಿತ್ತು. ಹಾಗಾಗಿ ಸ್ವತಃ ಲಾಜಿಕ್ ಹುಡುಕಲು ಹೊರಟ ರಾಮಾನುಜನ್ ಗಣಿತದೊಳಗೇ ಮುಳುಗಿಹೋದರು. ಹಾಗೆ ಗಣಿತದಲ್ಲಿ ಅತಿ ಹೆಚ್ಚು ಅಂಕ ಪಡೆದರೂ ಇತರ ಸಬ್ಜೆಕ್ಟ್‌ಗಳನ್ನು ನಿರ್ಲಕ್ಷಿಸಿದ ಕಾರಣ ಪರೀಕ್ಷೆಯಲ್ಲಿ ಪಲ್ಟಿ ಹೊಡೆದರು. ಮರಳಿ ಯತ್ನ ಮಾಡಿದರೂ ಪಾಸಾಗಲಿಲ್ಲ. ಜತೆಗೆ ಸ್ಕಾಲರ್‌ಶಿಪ್ ನಿಂತುಹೋದ ಕಾರಣ ಓದನ್ನೇ ನಿಲ್ಲಿಸಬೇಕಾಗಿ ಬಂತು. ಈ ನಡುವೆ ಇನ್ನಿಬ್ಬರು ತಮ್ಮಂದಿರು ಜನಿಸಿದ ಕಾರಣ ಮನೆಯ ಹಣಕಾಸು ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಫೇಲಾಗಿದ್ದ ಮಗನ ಬಗ್ಗೆ ಸಿಟ್ಟಿಗೆದ್ದ ಅಮ್ಮ-ಅಪ್ಪ ಕನಿಷ್ಠ ಮನೆಪಾಠವನ್ನಾದರೂ ಹೇಳಿಕೊಟ್ಟು ಒಂದಿಷ್ಟು ಸಂಪಾದನೆ ಮಾಡು ಎಂದರು. ಆದರೆ ರಾಮಾನುಜನ್ ಅವರ ಉತ್ಕೃಷ್ಟವಾದ ಮನೆಪಾಠ ಮಕ್ಕಳ ತಲೆಯೊಳಕ್ಕೇ ಹೋಗುತ್ತಿರಲಿಲ್ಲ. ಆಸ್ಟ್ರೇಲಿಯಾದ ಬ್ರೆಟ್ ಲೀಯ ಬೌನ್ಸರ್‌ನಂತೆ ತಲೆ ಮೇಲೇ ಹೋಗುತ್ತಿತ್ತು! ಮಕ್ಕಳು ಪಾಠಕ್ಕೆ ಬರುವುದನ್ನೇ ನಿಲ್ಲಿಸಿದರು. ಆದರೇನಂತೆ, ಮನೆಪಾಠ ಹೇಳಿಕೊಡುತ್ತಿದ್ದಾಗ ದೊರೆಯುತ್ತಿದ್ದ ಬಿಡುವಿನ ವೇಳೆಯಲ್ಲಿ ಗಣಿತದ ಲೆಕ್ಕಗಳನ್ನು ಬಿಡಿಸುತ್ತಿದ್ದ ರಾಮಾನುಜನ್, ಹೊಸ ಹೊಸ ಥಿಯರಮ್ ಬರೆಯಲು ಮನೆದೇವಿಯಾದ ‘ನಾಮಗಿರಿ ಲಕ್ಷ್ಮಿ’ಯೇ ತನಗೆ ಪ್ರೇರಣೆ ಎಂದು ಸ್ನೇಹಿತರ ಜತೆ ಹೇಳಿಕೊಳ್ಳುತ್ತಿದ್ದರು. ಇತ್ತ ಉದ್ಯೋಗವಿಲ್ಲದೆ ಹತಾಶರಾಗಿದ್ದ ರಾಮಾನುಜನ್ ಅವರ ಗಣಿತದ ದಾಹವನ್ನು ಅರಿತು ಸ್ನೇಹಿತರು, ಹಿತೈಷಿಗಳೇ ಅಷ್ಟಿಷ್ಟು ಸಹಾಯ ಮಾಡುತ್ತಿದ್ದರು. ಅಂಥ ಸಹಾಯ ಹಾಗೂ 1912ರಲ್ಲಿ ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ದೊರೆತ ಗುಮಾಸ್ತನ ಹುದ್ದೆಯ ಬಲದಿಂದ ಹಲವಾರು ಥಿಯರಮ್‌ಗಳನ್ನು ಬರೆಯಲು ಸಾಧ್ಯವಾಯಿತು. ಅವುಗಳನ್ನು ಇಂಗ್ಲೆಂಡಿನಲ್ಲಿರುವ ಪರಿಣತರಿಗೆ ಕಳುಹಿಸಿ ಕೊಡು ಎಂದು ಸ್ನೇಹಿತರೇ ಒತ್ತಾಯಿಸಿದರು. ಆದರೆ ಮೂರು ಬಾರಿ ಕಳುಹಿಸಿದರೂ ಯಾವ ಉತ್ತರವೂ ಬರಲಿಲ್ಲ. ಕೊನೆಗೆ 1913, ಜನವರಿ 16ರಂದು ಜಿ.ಎಚ್. ಹಾರ್ಡಿಯವರಿಗೆ ಪತ್ರ ಬರೆದರು. ಅದು ರಾಮಾನುಜನ್ ಜೀವನವನ್ನು ಮಾತ್ರವಲ್ಲ, ಗಣಿತಶಾಸ್ತ್ರದ ಇತಿಹಾಸವನ್ನೇ ಬದಲಾಯಿಸಿ ಬಿಟ್ಟತು! ಇಂಗ್ಲೆಂಡಿಗೆ ಬರುವಂತೆ ಹಾರ್ಡಿಯವರಿಂದ ಕರೆ ಬಂತು. ಆದರೆ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದ ರಾಮಾನುಜನ್ ಸಾಗರೋಲ್ಲಂಘನ ಮಾಡಲು ಆತನ ಅಮ್ಮ ಕೋಮಲತಮ್ಮಾಳ್ ತೀವ್ರ ವಿರೋಧ ವ್ಯಕ್ತಪಡಿಸಿದಳು. ಹಾಗಾಗಿ ತಾತ್ಕಾಲಿಕ ತಡೆ ಸೃಷ್ಟಿಯಾಯಿತು. ಆದರೇನಂತೆ ‘ಬೆಳಗ್ಗೆ ನಾನೊಂದು ಕನಸು ಕಂಡೆ. ಒಂದು ದೊಡ್ಡ ಕೊಠಡಿಯೊಳಗೆ ತನ್ನ ಮಗ ಕುಳಿತಿದ್ದ. ಆತನ ಸುತ್ತ ಯುರೋಪಿಯನ್ನರಿದ್ದರು. ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷಳಾದ ನಾಮಗಿರಿ ದೇವಿ, ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಹೊರಟಿರುವ ನಿನ್ನ ಮಗನಿಗೆ ಅಡ್ಡಿಪಡಿಸಬೇಡ ಎಂದಳು’ ಎಂದ ಕೋಮಲತಮ್ಮಾಳ್ ಮಗನಿಗೆ ಅನುಮತಿ ನೀಡಿದಳು. 1914, ಏಪ್ರಿಲ್‌ನಲ್ಲಿ ಬ್ರಿಟನ್‌ಗೆ ಬಂದಿಳಿದ ರಾಮಾನುಜನ್, ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜು ಸೇರಿದರು. ಯಾರ ಸಹಾಯವೂ ಇಲ್ಲದೆ ತಮಗಿಷ್ಟ ಬಂದಹಾಗೆ ಗಣಿತವನ್ನು ಕರಗತ ಮಾಡಿಕೊಂಡಿದ್ದ ರಾಮಾನುಜನ್‌ಗೆ ಶಾಸ್ತ್ರಬದ್ಧವಾಗಿ ಗಣಿತವನ್ನು ಕಲಿಸಲು ಹಾರ್ಡಿಯವರೇ ಮುಂದಾದರು. ಆದರೆ ನಾನು ಹೇಳಿಕೊಟ್ಟಿದ್ದಕ್ಕಿಂತ ರಾಮಾನುಜನ್ ಅವರಿಂದ ಕಲಿತಿದ್ದೇ ಹೆಚ್ಚು ಎನ್ನುತ್ತಾರೆ ಹಾರ್ಡಿ. ಐದು ವರ್ಷಗಳ ಕಾಲ ಬ್ರಿಟನ್‌ನಲ್ಲಿದ್ದ ರಾಮಾನುಜನ್ ಅವರ ಜತೆ ಸೇರಿದ ಹಾರ್ಡಿ ಗಣಿತ ಶಾಸ್ತ್ರದ ಇತಿಹಾಸದಲ್ಲೇ ಅತ್ಯುತ್ತಮ ಸಂಶೋಧನಾ ಪ್ರಬಂಧಗಳನ್ನು ಬರೆದು ಜಗತ್ತಿನ ಹುಬ್ಬೇರಿಸಿದರು. ಕೇಂಬ್ರಿಡ್ಜ್‌ನಲ್ಲಿ ತನ್ನ ಕಲಿಕೆಯ ದಾಹವನ್ನು ಇಂಗಿಸಿಕೊಳ್ಳುತ್ತಾ ಹೋದ ರಾಮಾನುಜನ್ ಅವರು ಕಂಡುಹಿಡಿದ ಗಣಿತದ ಫಲಿತಾಂಶಗಳು 21ನೇ ಶತಮಾನದಲ್ಲಿ ಕಂಪ್ಯೂಟರ್ ಸೈನ್ಸ್, ಭೌತಶಾಸ್ತ್ರ, ಕ್ಯಾನ್ಸರ್ ಸಂಶೋಧನೆ, ಪಾಲಿಮರ್ ಕೆಮಿಸ್ಟ್ರಿಯಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವಲ್ಲಿ ಸಹಕಾರಿಯಾಗುತ್ತಿವೆ! ಸಾಮಾನ್ಯವಾಗಿ ವಿಜ್ಞಾನಿಗಳು ದೇವರನ್ನು ನಂಬುವುದಿಲ್ಲ ಎನ್ನುತ್ತಾರೆ. ಆ ಮಾತಿಗೆ ಒಂದು ಉದಾಹರಣೆಯೆಂಬಂತೆ ಹಾರ್ಡಿಯವರು ಕಟ್ಟಾ ನಾಸ್ತಿಕ. ಆದರೆ ವೈರುಧ್ಯವೆಂದರೆ ರಾಮಾನುಜನ್ ಅವರು ಅಷ್ಟೇ ಕಟ್ಟಾ ದೈವಭಕ್ತ. ರಾಮಾನುಜನ್ ಹಾಗೂ ಹಾರ್ಡಿ ಸ್ನೇಹದ ಬಗ್ಗೆ ಡೆವಿಡ್ ಲೀವಿಟ್ ಬರೆದಿರುವ ‘ದಿ ಇಂಡಿಯನ್ ಕ್ಲರ್ಕ್’ ಪುಸ್ತಕದಲ್ಲಿ ಇಂಥ ವೈರುಧ್ಯದ ಬಗ್ಗೆಯೇ ಬೆಳಕು ಚೆಲ್ಲಲಾಗಿದೆ. ‘ರಾಮಾನುಜನ್ ಅವರು ತಮ್ಮ ಮನೆಯವರನ್ನು ಮೆಚ್ಚಿಸುವುದಕ್ಕೋಸ್ಕರ ಆಸ್ತಿಕನಂತೆ ಸೋಗು ಹಾಕುತ್ತಾರೆ. ಅವರೊಬ್ಬ ವಿಚಾರವಾದಿ’ ಎಂದೇ ಹಾರ್ಡಿ ಹೇಳುತ್ತಿದ್ದರು. ಆದರೆ ‘An equation has no meaning unless it expresses a thought of God’ ಎನ್ನುತ್ತಿದ್ದರು ರಾಮಾನುಜನ್. ‘ವಿಜ್ಞಾನ ಎಂದಿಗೂ ದೇವರ ಅಸ್ತಿತ್ವವನ್ನು ನಿರಾಕರಿಸುವುದಿಲ್ಲ. ಅದು ಯಾವತ್ತೂ ಅತ್ಯುನ್ನತ ಶಕ್ತಿಯ(ಸುಪ್ರೀಂ ಪವರ್) ಇರುವನ್ನು ಒಪ್ಪಿಕೊಳ್ಳುತ್ತದೆ ಎಂದು ‘ಏಂಜೆಲ್ಸ್ ಆಂಡ್ ಡೆಮೊನ್ಸ್’ನಲ್ಲಿ ಡಾನ್ ಬ್ರೌನ್ ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದೇನೇ ಇರಲಿ, ಕಟ್ಟಾ ಸಸ್ಯಾಹಾರಿಯೂ ಆಗಿದ್ದ ರಾಮಾನುಜನ್ ಅವರು ಆಹಾರ ಮತ್ತು ಹವಾಮಾನ ವೈಪರಿತ್ಯದಿಂದಾಗಿ ಲಂಡನ್‌ನಲ್ಲಿ ಹಾಸಿಗೆ ಹಿಡಿದಿದ್ದರು. ಅವರನ್ನು ಕಾಣಲು ಬಂದ ಹಾರ್ಡಿಯವರು ತಾವು ಆಗಮಿಸಿದ ಟ್ಯಾಕ್ಸಿ ನಂಬರ್ ಬಗ್ಗೆ ಚರ್ಚಿಸಲು ಆರಂಭಿಸಿದರು. ‘ಅದೊಂದು ಸಪ್ಪೆನಂಬರ್(1729) ಎಂದರು ಹಾರ್ಡಿ! ಆದರೆ ‘ಇಲ್ಲಾ, ಇಲ್ಲಾ ಹಾರ್ಡಿ…ಅದು ತುಂಬಾ ಒಳ್ಳೆಯ ನಂಬರ್. ಅದರಲ್ಲಿ ಎರಡು ಕ್ಯೂಬ್‌ಗಳ ಒಟ್ಟು ಮೊತ್ತವನ್ನು ಎರಡು ವಿಭಿನ್ನ ವಿಧಗಳಲ್ಲಿ ವಿವರಿಸಬಹುದು. 1729=(12x12x12)+(1x1x1) ಮತ್ತು (9x9x9)+(10x10x10)’ ‘ ಎಂದರು ರಾಮಾನುಜನ್!! ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರೂ ಅಷ್ಟು ಶೀಘ್ರವಾಗಿ, ಮತ್ತೊಬ್ಬ ಮಹಾನ್ ಹಾಗೂ ತನ್ನನ್ನು ಜಗತ್ತಿಗೆ ಪರಿಚಯಿಸಿದ ಗಣಿತಶಾಸ್ತ್ರಜ್ಞನ ಮಾತನ್ನೇ ತಪ್ಪೆಂದು ಸಾಬೀತು ಪಡಿಸುತ್ತಾರೆಂದರೆ ರಾಮಾನುಜನ್ ಅವರ ಚಿಂತನೆಯ ಮಟ್ಟ ಎಂಥದ್ದಿರಬಹುದು? ಕ್ಯಾಲ್ಕುಲೇಟರ್ ಇಲ್ಲದ ಕಾಲದಲ್ಲಿ ಅಷ್ಟು ಶೀಘ್ರವಾಗಿ ವಿವರಿಸುತ್ತಿದ್ದರೆಂದರೆ ಅವರೆಷ್ಟು ಪರಿಶ್ರಮ ಪಟ್ಟಿರಬಹುದು? ಗಣಿತದ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿರಬಹುದು?ಆದರೆ ಅವರು ಹುಟ್ಟಿದ ನಾಡಾದ ಭಾರತದಲ್ಲಿ ಈಗ ಎಂಥ ಪರಿಸ್ಥಿತಿ ಸೃಷ್ಟಿಯಾಗಿದೆ? ಎರಡೊಂದ್ಲಿ ಎರಡು, ಎರಡೆರಡ್ಲಿ ನಾಲ್ಕು ಅಂಥ ಈಗಿನ ಮಕ್ಕಳಿಗೆ ಬಾಯಿಪಾಠ ಮಾಡಿಸುತ್ತಾರೆ. ಉನ್ನತ ಶಿಕ್ಷಣದ ಹಂತಕ್ಕೆ ಬಂದಾಗಲೂ Rote memorization ಮಾಡಲಾಗುತ್ತದೆ. ಅಂದರೆ ಸೂತ್ರಗಳನ್ನು ಬಾಯಿಪಾಠ ಮಾಡಿಕೊಂಡರಷ್ಟೇ ಪರೀಕ್ಷೆಯಲ್ಲಿ ಲೆಕ್ಕಗಳನ್ನು ಬಿಡಿಸಲು ಹಾಗೂ ಪಾಸಾಗಲು ಸಾಧ್ಯ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಖಂಡಿತ ಬಾಯಿಪಾಠ ಮಾಡಲೇಬಾರದು ಎಂದು ಹೇಳುತ್ತಿಲ್ಲ. ಆದರೆ ಸೂತ್ರದಲ್ಲಿರುವ ತರ್ಕವನ್ನು ಅರ್ಥಮಾಡಿಕೊಂಡು ಬಾಯಿಪಾಠ (memorization) ಮಾಡುವುದಕ್ಕೂ ಸುಮ್ಮನೆ ಬಾಯಿಪಾಠ (Rote memorization) ಮಾಡಿಕೊಂಡು ಪರೀಕ್ಷೆ ವೇಳೆ ನೆನಪಿಸಿಕೊಂಡು ಬರೆಯುವುದಕ್ಕೂ ಭಾರೀ ವ್ಯತ್ಯಾಸವಿದೆ. ಅಷ್ಟಕ್ಕೂ ತರ್ಕವನ್ನು ಅರ್ಥಮಾಡಿಕೊಂಡು ಬಾಯಿಪಾಠ ಮಾಡಿದರಷ್ಟೇ ಚಿರಕಾಲ ನೆನಪಿನಲ್ಲಿ ಉಳಿಯಲು ಸಾಧ್ಯ. ಇತ್ತ ತರ್ಕವನ್ನು ಹೇಳಿಕೊಡುವಂಥ ಸಾಮರ್ಥ್ಯವೂ ಹೆಚ್ಚಿನ ಮೇಷ್ಟ್ರಿಗಿಲ್ಲ! ಎರಡನ್ನ ಮೂರು ಸಲ ಕೂಡಿಸಿದರೆ (2×3=6) ಆರಾಗುತ್ತದೆ- ಇಂಥ ಸರಳ ಲಾಜಿಕ್ಕನ್ನು ಸಾಮಾನ್ಯವಾಗಿ ಎಲ್ಲರೂ ಹೇಳಿಕೊಡುತ್ತಾರೆ. ಆದರೆ ಮೈನಸ್ ಡ ಮೈನಸ್ ಏಕೆ ಪ್ಲಸ್ ಆಗುತ್ತದೆ? ಮೈನಸ್ ಡ ಪಸ್ಲ್ ಏಕೆ ಮೈನಸ್ ಆಗುತ್ತದೆ ನೀವೇ ಹೇಳಿ? ಅದರ ಹಿಂದಿರುವ ಲಾಜಿಕ್ ಏನು? ಆ ಲಾಜಿಕ್ಕನ್ನು ಹೇಳಿಕೊಟ್ಟರೆ, ಅದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡರೆ ಕಬ್ಬಿಣದ ಕಡಲೆ ಎನಿಸಿಕೊಳ್ಳುವ ಗಣಿತವೂ ಅತ್ಯಂತ ಕುತೂಹಲಕಾರಿ ಸಬ್ಜೆಕ್ಟ್ ಆಗಬಲ್ಲದು. ಹಾಗೆ ಆಸಕ್ತಿ ಹುಟ್ಟಿಸುವ ಬದಲು ನಮ್ಮ ಈಗಿನ ಶಿಕ್ಷಣದಲ್ಲಿ ಪರೀಕ್ಷೆ ಬರೆಯುವುದಕ್ಕೂ ಕ್ಯಾಲ್ಕುಲೇಟರ್ ಬಳಸಲು ಅವಕಾಶ ಕಲ್ಪಿಸಲಾಗಿದೆ ಎಂದರೆ ನಾವೆತ್ತ ಸಾಗುತ್ತಿದ್ದೇವೆ ಎಂಬುದನ್ನು ಯೋಚಿಸಿ? ಜ್ಞಾನಾರ್ಜನೆಗೆ ಬದಲಾಗಿ ಪರೀಕ್ಷೆಗೆ ಸೀಮಿತವಾಗಿರುವ ನಮ್ಮ ಕಲಿಕೆಯಿಂದಾಗಿ ಬಾಯಿಪಾಠ ಮಾಡುವ ಜಾಡ್ಯ ಅಂಟಿಕೊಂಡಿದೆ. ಇಂಥ ತಪ್ಪನ್ನು ಸರಿಪಡಿಸಿಕೊಳ್ಳದೇ ಹೋದರೆ ಈ ದೇಶದಲ್ಲಿ ರಾಮಾನುಜನ್ ಅವರಂಥ ಮತ್ತೊಬ್ಬ ಜೀನಿಯಸ್ ಹುಟ್ಟುವುದು ಬಿಡಿ, ಒಬ್ಬ ಮ್ಯಾಥಮೆಟೀಶಿಯನ್ ಕೂಡ ಜನಿಸುವುದಿಲ್ಲ. ಜಗತ್ತಿಗೆ ಸೊನ್ನೆ ಕೊಟ್ಟಿದ್ದು ನಾವೇ, ಆರ್ಯಭಟ, ವರಾಹ ಮಿಹಿರ, ಭಾಸ್ಕರ ನಮ್ಮವರೇ ಅಂತ ಹಳೆಯದನ್ನೇ ಜಪ ಮಾಡಬೇಕಾಗುತ್ತದೆ. ಜಗತ್ತಿಗೆ ಸೊನ್ನೆಯನ್ನು ಕೊಟ್ಟವರು ನಾವೇ ಆಗಿದ್ದರೂ ಬಾಯಿಪಾಠ ಮಾಡುವ ಜಾಡ್ಯದಿಂದಾಗಿ ಈಗ ಜಗತ್ತಿಗೆ ನಾವು ಕೊಡುತ್ತಿರುವ ಕೊಡುಗೆಯೂ ‘ಸೊನ್ನೆಯೇ ಆಗಿದೆ! ಈ ದೇಶ ಹೋಮಿ ಜೆ. ಭಾಭಾ, ಸಿ.ವಿ. ರಾಮನ್, ವಿಕ್ರಮ್ ಸಾರಾಭಾಯ್, ರಾಜಾರಾಮಣ್ಣ, ವಿಶ್ವೇಶ್ವರಯ್ಯ ಅವರಂಥ ಮಹಾನ್ ವ್ಯಕ್ತಿಗಳಿಗೆ ಜನ್ಮ ನೀಡಿದೆ. ಅದರಲ್ಲೂ ಸ್ವಾಮಿ ವಿವೇಕಾನಂದ (39 ವರ್ಷ), ಶ್ರೀನಿವಾಸ ರಾಮಾನುಜನ್(32 ವರ್ಷ) ಅವರು ಬದುಕಿದ್ದು ಕೆಲವೇ ವರ್ಷಗಳಾದರೂ ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳುವಂಥ ಸಾಧನೆ ಮಾಡಿ ಹೋಗಿದ್ದಾರೆ. ಒಬ್ಬರು ನಮ್ಮ ಧರ್ಮದ ಹಿರಿಮೆಯನ್ನು ಸಾರುವ ಮೂಲಕ ಜಗತ್ತಿನ ಕಲ್ಪನೆಯನ್ನೇ ಬದಲಾಯಿಸಿದರೆ, ಮತ್ತೊಬ್ಬರು ಗಣಿತದ ತರ್ಕಕ್ಕೆ ಹೊಸ ಅರ್ಥವನ್ನೇ ಕೊಟ್ಟು ಹೋಗಿದ್ದಾರೆ. ಇನ್ನೂ ಹತ್ತು- ಹಲವು ಸಹಸ್ರಮಾನಗಳು ಬಂದರೂ, ಗಣಿತ ಇರುವವರೆಗೂ ರಾಮಾನುಜನ್ ಕೊಟ್ಟ ಸೂತ್ರಗಳನ್ನು ಪ್ರತಿಯೊಬ್ಬರೂ ಓದಿಯೇ ಓದುತ್ತಾರೆ. ಹಾಗೆ ರಾಮಾನುಜನ್ ಹೆಸರನ್ನು ನೆನಪಿಸಿಕೊಳ್ಳುವಾಗಲೆಲ್ಲ ಅವರಿಗೆ ಜನ್ಮ ನೀಡಿದ ಭಾರತವನ್ನೂ ನೆನಪಿಸಿಕೊಳ್ಳಬೇಕಾಗುತ್ತದೆ. ಅಂದಹಾಗೆ, ರಾಮಾನುಜನ್ ಜನ್ಮತಳೆದ ದಿನ ಡಿಸೆಂಬರ್ 22. ಹಾಗಾಗಿ ಅವರ ಬಗ್ಗೆ ಬರೆಯಬೇಕೆನಿಸಿತು. ಸಾಧ್ಯವಾದರೆ ‘The man who knew infinity’ ಪುಸ್ತಕವನ್ನೊಮ್ಮೆ ಓದಿ. Hareeshkumar K GHS Huskuru Malavalli TQ Mandya Dt 9880328224 -- 1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member 2. For STF training, visit KOER - http://karnatakaeducation.org.in/KOER/en/index.php 4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha 4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions 5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ --- You received this message because you are subscribed to the Google Groups "Maths & Science STF" group. To unsubscribe from this group and stop receiving emails from it, send an email to mathssciencestf+unsubscr...@googlegroups.com. To post to this group, send an email to mathssciencestf@googlegroups.com. Visit this group at https://groups.google.com/group/mathssciencestf. For more options, visit https://groups.google.com/d/optout.